ಕನ್ನಡಪ್ರಭ ವಾರ್ತೆ ಅಥಣಿ

ಅಡಹಳ್ಳಿ ಗ್ರಾಮದ ಕೆರೆ ಬಳಿಯ ಸದಾಶಿವ ಮಂದಿರದಿಂದ ಬೇಡರಹಟ್ಟಿ ಸೀಮೆವರೆಗಿನ ಸಾರ್ವಜನಿಕ ರಸ್ತೆಯನ್ನು ಇಬ್ಬರು ವ್ಯಕ್ತಿಗಳು ಮೇಲಿಂದ ಮೇಲೆ ಬಂದ್ ಮಾಡುತ್ತಿದ್ದು, ಇದರಿಂದ ಪ್ರತಿನಿತ್ಯ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಚಿದಾನಂದ ಗುಡ್ಡಾಪುರ ಆಗ್ರಹಿಸಿದರು. ತಾಲೂಕು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಬೇಡರಹಟ್ಟಿ ಗ್ರಾಮದ ದಾರಿಯಲ್ಲಿ ಮಹದೇವಿ ಚನ್ನಪ್ಪ ಸಿಂಧೂರ ಮತ್ತು ಅಣ್ಣಪ್ಪ ಶಿವರಾಯ ಅವಟಿ ಎಂಬವರು ರಸ್ತೆ ಬಂದ್ ಮಾಡುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದು, ನ್ಯಾಯಾಲಯದ ಅಂತಿಮ ನಿರ್ಣಯ ಆಗುವವರಿಗೆ ಯಾವುದೇ ರಸ್ತೆಯನ್ನು ಬಂದ್ ಮಾಡಬಾರದು ಎಂದು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದರೂ ಈಗ ಮತ್ತೆ ರಸ್ತೆ ಬಂದ್ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ರಸ್ತೆಯನ್ನು ಕೂಡಲೇ ಮುಕ್ತಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು. ಉಪ ತಹಸೀಲ್ದಾರ್ ಮಹಾದೇವ ಬಿರಾದಾರ, ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಿ ರಸ್ತೆಯನ್ನು ತೆರವುಗೊಳಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಈ ವೇಳೆ ಶ್ರೀಶೈಲ ಕೂಡ್ಲಪಗೋಳ, ಮುತ್ತಪ್ಪ ದೊಡ್ಡವಾಡ, ಶಂಕರ ಕೂಡ್ಲಪಗೋಳ, ಗುರುದೇವ ಗುಡ್ಡಾಪುರ, ವಿಠಲ ಚಿಕ್ಕಟ್ಟಿ, ಬಸಯ್ಯ ಮಠಪತಿ, ಬಸಪ್ಪ ಸಾತಣ್ಣವರ, ಗಿರಮಲ್ಲ ಸಾತಣ್ಣವರ, ಶ್ರೀಶೈಲ ಅವಟಿ, ಬಸಪ್ಪ ಪೂಜಾರಿ, ಮಲ್ಲಿಕಾರ್ಜುನ ಗುಡ್ಡಾಪುರ, ಶಿವಾನಂದ ಕಿರಣಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.