ಹುಬ್ಬಳ್ಳಿ: ಕಳೆದ ಎರಡೂವರೆ ವರ್ಷಗಳಿಂದ ಕಚೇರಿಯಲ್ಲಿ ವಾಸ್ತವ್ಯ ಹೂಡಿಯೂ ಸುಮಾರು ₹ 6.5 ಲಕ್ಷ ಮೊತ್ತದ ಎಚ್‌ಆರ್‌ಎ ಪಡೆದು ಸರ್ಕಾರಕ್ಕೆ ವಂಚನೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಅವರಿಗೆ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ಎಸ್.ಎಸ್.ಕೆಳದಿಮಠ ಅವರು ಗುರುವಾರ (24.04.25) ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಹೀಗೆ ನೋಟಿಸ್ ನೀಡಿರುವ ಡಿಡಿಪಿಐ, 3 ದಿನಗಳ ಒಳಗಾಗಿ ಸಮರ್ಪಕ ಉತ್ತರ ನೀಡಬೇಕು.ನಿಗದಿತ ಅವಧಿಯೊಳಗೆ ನಿಮ್ಮ ಉತ್ತರ ನಮಗೆ ತಲುಪದಿದ್ದರೆ, ನೀವು ಹೇಳುವುದು ಏನೂ ಇಲ್ಲ ಎಂದು ಭಾವಿಸಿ ಮೇಲಾಧಿಕಾರಿಗಳಿಗೆ ನಿಮ್ಮ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ.
ಕನ್ನಡಪ್ರಭ ತನ್ನ ಗುರುವಾರದ ಸಂಚಿಕೆಯಲ್ಲಿ "ಕಚೇರಿಯಲ್ಲೇ ಬಿಇಒ ವಾಸ್ತವ್ಯ: ₹6.5 ಲಕ್ಷ ಎಚ್‌ಆರ್‌ಎ ವಂಚನೆ " ಶೀರ್ಷಿಕೆಯಡಿ ಇಲ್ಲಿನ ಗಂಟಿಕೇರಿ ಪ್ರದೇಶದ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಕಟ್ಟಡದಲ್ಲೇ ಬಿಇಒ ವಾಸ್ತವ್ಯ ಹೂಡಿಯೂ ಎಚ್‌ಆರ್‌ಎ ಪಡೆದು ಸರ್ಕಾರಕ್ಕೆ ವಂಚಿಸಿದ ಮತ್ತು ಆ ಕೋಣೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆಳೆದ ವಿಸ್ತೃತ ವರದಿಗೆ ಸ್ಪಂಧಿಸಿ ಡಿಡಿಪಿಐ ಈ ಕ್ರಮ ಕೈಕೊಂಡಿದ್ದಾರೆ.ಅಪರ ಆಯುಕ್ತರಿಗೆ ದೂರು:
ಕನ್ನಡಪ್ರಭದ ವರದಿ ಗಮನಿಸಿದ "ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ "ದ ಪದಾಧಿಕಾರಿಗಳು ಗುರುವಾರ ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರಿಗೆ ಲಿಖಿತ ದೂರು ಸಲ್ಲಿಸಿ "ಬಿಇಒ ಚನ್ನಪ್ಪಗೌಡರ ಕಳೆದ ಎರಡೂವರೆ ವರ್ಷಗಳಿಂದ ಕಚೇರಿಯಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಆದಾಗ್ಯೂ ಅಪಾರ ಮೊತ್ತದ ಎಚ್‌ಆರ್‌ಎ ಪಡೆದು ಸರ್ಕಾರಕ್ಕೆ ವಂಚಿದ್ದಾರೆ. ಯಾವುದೇ ತಪ್ಪು ಮಾಡದ 3 ಜನ ಸಿಆರ್‌ಪಿ, ಇಬ್ಬರು ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿ ಅವರಿಗೆ ಕಿರುಕುಳ ನೀಡಿದ್ದಾರೆ. ಶಹರ ಬಿಇಒ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಸಹಾಯಕ ಶಿಕ್ಷಕಿಯರು ಬಿಇಒ ದರ್ಪಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಸಮಗ್ರ ತನಿಖೆ ಮಾಡಿ ಚನ್ನಗೌಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಬೇಕು " ಎಂದು ಶ್ರೀಶೈಲ ಗಡದಿನ್ನಿ, ಆರ್.ರಂಜನ್, ರವೀಂದ್ರ ಪಾಟೀಲ್ ಹಾಗೂ ಇತರರು ಆಗ್ರಹಿಸಿದ್ದಾರೆ.ಈ ವಿಷಯದ ಬಗ್ಗೆ ಹಿಂದೆಯೂ ಲಿಖಿತ ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಈಗಲೂ ಕ್ರಮ ಕೈಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ತಮ್ಮ ಕಚೇರಿ ಎದುರು ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಅಪರ ಆಯುಕ್ತರಿಗೆ ತಿಳಿಸಿದ್ದಾರೆ.
ಪೋನ್ ಪೇ ಮೂಲಕ ಲಂಚ: ಬಿಇಒ ಚನ್ನಪ್ಪಗೌಡರ ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಶಿಕ್ಷಕ/ ಶಿಕ್ಷಕಿಯರು ಕನ್ನಡಪ್ರಭ ಎದುರು ತಾವು ಬಿಇಒ ಅವರಿಂದ ಅನಿಭವಿಸಿದ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡು, ಭ್ರಷ್ಟಾಚಾರದ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಅದರಲ್ಲಿ "ಪೋನ್ ಪೇ ಮೂಲಕ ಲಂಚ " ಪಡೆಯುತ್ತಿರುವ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.ಇಲ್ಲಿ ಎಲ್ಲವೂ ಕ್ಯಾಶ್‌ಲೆಸ್, ಪೋನ್ ಪೇ ಮೂಲಕವೇ ಎಲ್ಲ ವ್ಯವಹಾರ ನಡೆಯುತ್ತಿದೆಯಂತೆ. ಕೆಲವರ ಮೊಬೈಲ್ ನಂಬರಿನ ಎರಡೂವರೇ ವರ್ಷದ ಪೋನ್ ಪೇ ವಹಿವಾಟು ದಾಖಲೆ ಪರಿಶೀಲಿಸಿದರೆ ಭ್ರಷ್ಟಾಚಾರದ ವಿರಾಟ್ ರೂಪ ದೃಗ್ಗೋಚರ ಆಗಲಿದೆ ಎನ್ನುವುದು ಸಂತ್ರಸ್ತ ಶಿಕ್ಷಕರ ಆಗ್ರಹ.
ಗಂಟಿಕೇರಿ ಸಹಿಪ್ರಾ ಶಾಲೆ-5ರ ಎಸ್‌ಡಿಎಂಸಿ ಖಾತೆಯ ₹ 9 ಲಕ್ಷ ಹಣ ದುರುಪಯೋಗ, ಶಿಕ್ಷಕ ದಿನ ಆಚರಣೆಗೆ ಖಾಸಗೀ ಶಾಲೆಗಳಿಂದ ಸಂಗ್ರಹಿಸಿದ ಮೊತ್ತ, ಕನ್ನಡ ಕಲಾ ಶಿಕ್ಷಕಿಯನ್ನು ಇಂಗ್ಲೀಷ್ ಶಿಕ್ಷಕಿ ಎಂದು ತೋರಿಸಿದ್ದು, 3 ಜನ ಸಿಆರ್‌ಪಿಗಳನ್ನು ಒಂದೂವರೆ ತಿಂಗಳು ಅಮಾನತು ಮಾಡಿ ಅದೇ ಸ್ಥಾನಕ್ಕೆ ಮರು ನಿಯುಕ್ತಿ ಮಾಡಿದ್ದು, ಎಲ್‌ಕೆಜಿ-ಯುಕೆಜಿ ಮಕ್ಕಳ ಪೋಷಕರಿಂದ ಸಂಗ್ರಹಿಸಿದ ಹಣ, ಚಿಕ್ಕಿ ಬಾಳೆಹಣ್ಣು ಮೊಟ್ಟೆಯಿಂದ ಬರುವ ಅಪಾರ ಮೊತ್ತ... ಹೀಗೆ ಹತ್ತಾರು ಸಂಗತಿಗಳನ್ನು ಮನಬಿಚ್ಚಿ ಮಾತನಾಡಿರುವ ಶಿಕ್ಷಕಿಯರು, ಅವುಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನೂ ಒದಗಿದ್ದಾರೆ.