ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಹನಗೋಡು ಹೋಬಳಿ ಕೇಂದ್ರದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಿಂಗಳಿನಿಂದ ಬಿಸಿಯೂಟದಲ್ಲಿ ಮೊಟ್ಟೆ ನೀಡಿಲ್ಲವೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಉಪ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ತಾಪಂ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಶಾಲೆಯಲ್ಲಿ ಎರಡು ತಿಂಗಳ ಹಿಂದೆ ಸತತ ಒಂದು ತಿಂಗಳ ಕಾಲ ಮಕ್ಕಳಿಗೆ ಮೊಟ್ಟೆ ನೀಡಿಲ್ಲವೆಂದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲೆಯ ಉಪಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಈ ಸಂಬಂಧ ಡಿಡಿಪಿಐ, ಜಿಪಂ ಸಿಇಒ ಹಾಗೂ ಆಯುಕ್ತರಿಗೆ ಲಿಖಿತ ಮಾಹಿತಿ ನೀಡಲಾಗಿದೆ. ಬಿಸಿಯೂಟದಲ್ಲಿ ಪಾಲಕರಿಂದ ಒಪ್ಪಿಗೆ ಪತ್ರ ಪಡೆದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೊಟ್ಟೆ ನೀಡಲು ಸರ್ಕಾರ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶದ ಉಲ್ಲಂಘನೆ ಸಹಿಸುವುದಿಲ್ಲವೆಂದು ತಿಳಿಸಿದರು.ತಾಪಂ ಇಒ ಕೆ. ಹೊಂಗಯ್ಯ ಮಧ್ಯೆ ಪ್ರವೇಶಿಸಿ ಒಂದು ತಿಂಗಳುಗಳ ಕಾಲ ಮೊಟ್ಟೆ ಕೊಡಲಿಲ್ಲವೆಂದರೂ ಅಕ್ಷರ ದಾಸೋಹದ ತಾಲೂಕು ಸಹಾಯಕ ನಿರ್ದೇಶಕರಿಗೆ ಮಾಹಿತಿ ಬರಲಿಲ್ಲವೇಕೆ ಎಂದು ಎಡಿ ರಾಜೇಂದ್ರ ಅವರನ್ನು ಪ್ರಶ್ನಿಸಿದಾಗ ಅಧಿಕಾರಿ ಮೌನಕ್ಕೆ ಶರಣಾದರು.
ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಹಾಡಿಯದ ಅಯ್ಯನಕೆರೆ ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪೂರ್ಣ ಗಿರಿಜನ ಮಕ್ಕಳು (ಒಟ್ಟು 28 ವಿದ್ಯಾರ್ಥಿಗಳಿದ್ದಾರೆ) ವ್ಯಾಸಂಗ ಮಾಡುತ್ತಿದ್ದು, ಈ ಶಾಲೆ ಪಿಎಂ ಜನ್ ಮನ್ ಯೋಜನೆಗೆ ಆಯ್ಕೆಯಾಗಿದ್ದು, ಆದಿವಾಸಿ ಜೇನು ಕುರುಬ ಸಮುದಾಯದ ಮಕ್ಕಳಿಗಾಗಿಯೇ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಅದರಂತೆ 2.6 ಕೋಟಿ ರು. ಗಳ ವೆಚ್ಚದಡಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಯೋಜನೆಯಡಿ ವಸತಿನಿಲಯವನ್ನೂ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ಗ್ರಾಮದ ಇತರ ಸಮುದಾಯದ ವಿದ್ಯಾರ್ಥಿಗಳೂ ಕೂಡ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದರು.ಬಾಲ್ಯ ವಿವಾಹ ಪ್ರಕರಣಗಳು:
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಜುಲೈವರೆಗೆ ಒಟ್ಟು 13 ಕಡೆಗಳಲಿ ಬಾಲ್ಯವಿವಾಹ ಪ್ರಕರಣಗಳನ್ನು ಗುರುತಿಸಿ ವಿವಾಹವಾಗದಂತೆ ತಡೆ ಹಿಡಿಯಲಾಗಿದೆ. ಈ ಪೈಕಿ 10 ಪ್ರಕರಣಗಳು ಒಂದು ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ 10 ಪ್ರಕರಣಗಳು ಬಂದಿವೆ. ಬಾಲಮಂದಿರದಲ್ಲಿ ಇಬ್ಬರು ದಾಖಲಾಗಿದ್ದಾರೆಂದು ತಿಳಿಸಿದರು.ತಾಲೂಕಿನಲ್ಲಿ ಒಟ್ಟು 380 ಅಂಗನವಾಡಿ ಕೇಂದ್ರಗಳಿದ್ದು, 281 ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ. ತಾಲೂಕಿನ ಹಗರನಹಳ್ಳಿ, ಮೂಕನಹಳ್ಳಿ, ಗೌರಿಪುರ ಮತ್ತು ಹೊನ್ನಿಕುಪ್ಪೆ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ನಿವೇಶನ ಸಿಗುತ್ತಿಲ್ಲ. ನಗರ ವ್ಯಾಪ್ತಿಯಲ್ಲೂ 8 ಕಡೆಗಳಲ್ಲಿ ನಿವೇಶನದ ಕೊರತೆ ಕಾಡುತ್ತಿದೆ. ಕಳೆದ ಮೇ ತಿಂಗಳವರೆಗೆ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಹಣ ವಿತರಣೆಯಾಗಿದ್ದು, ಜೂನ್ ಮತ್ತು ಜುಲೈ ತಿಂಗಳ ಬಾಕಿ ಇದೆ ಎಂದರು.
ಪಿಎಂ ಸೂರ್ಯಘರ್ ಯೋಜನೆಗೆ ಬಿಳಿಕೆರೆ ಗ್ರಾಮ ಆಯ್ಕೆ:ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಪಿಎಂ ಸೂರ್ಯಘರ್ (ಸೌರಗ್ರಾಮ) ಯೋಜನೆಗೆ ತಾಲೂಕಿನ ಬಿಳಿಕೆರೆ ಗ್ರಾಮ ಆಯ್ಕೆಯಾಗಿದೆ ಎಂದು ಬಿಳಿಕೆರೆ ಎಇಇ ಸಿ. ಅನಿಲ್ ತಿಳಿಸಿದರು.
ಯೋಜನೆಯಡಿ ಗ್ರಾಮದಲ್ಲಿ ಪ್ರತಿಯೊಂದು ಮನೆಯವರೂ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಗ್ರಾಪಂ ಮತ್ತು ನಿಗಮದ ಅಧಿಕೃತ ಮಾರಾಟಗಾರರ ಸಮನ್ವಯದೊಂದಿಗೆ ಸೋಲಾರ್ ಪ್ಯಾನಲ್ (ಸೌರ ಮೇಲ್ಛಾವಣಿ ಘಟಕಗಳು)ಗಳನ್ನು ಅಳವಡಿಸಿಕೊಂಡು ನವೀಕರಿಸಬಹುದಾದ ಶಕ್ತಿ ಮೂಲ ವಿದ್ಯುತ್ ಉತ್ಪಾದಿಸುವ ಸಂಬಂಧ ಮೌಲ್ಯಯುತ ಕೊಡುಗೆ ನೀಡಿದಂತಾಗಲಿದೆ. 6 ತಿಂಗಳ ಕಾಲಾವಕಾಶವಿದ್ದು ಸಂಪೂರ್ಣ ಸೋಲಾರ್ ಶಕ್ತಿ ಬಳಕೆ ಗ್ರಾಮವಾಗಿ ನಿರ್ಧರಿತವಾದಲ್ಲಿ ಕೇಂದ್ರ ಸರ್ಕಾರ ಒಂದು ಕೋಟಿ ರೂ.ಗಳ ಬಹುಮಾನವನ್ನು ಗ್ರಾಪಂಗೆ ನೀಡಲಿದೆ.ಸಭೆಯಲ್ಲಿ ಸಹಾಯಕ ಲೆಕ್ಕಾಧಿಕಾರಿ ಹರಿಣಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.