ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದ ರೆಸಾರ್ಟ್‌ಗೆ ನೋಟಿಸ್

KannadaprabhaNewsNetwork |  
Published : Jan 30, 2026, 01:15 AM IST
ರೆಸಾರ್ಟ್‌ | Kannada Prabha

ಸಾರಾಂಶ

ಭದ್ರಾ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಅಭಯಾರಣ್ಯದ ಬಫರ್ ಝೋನ್ ವ್ಯಾಪ್ತಿಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ಬಹುಕೋಟಿ ವೆಚ್ಚದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಕಾಮಗಾರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡಿದ್ದಲ್ಲದೆ ಕಾಮಗಾರಿಗೆ ತಡೆ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭದ್ರಾ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಅಭಯಾರಣ್ಯದ ಬಫರ್ ಝೋನ್ ವ್ಯಾಪ್ತಿಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ಬಹುಕೋಟಿ ವೆಚ್ಚದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಕಾಮಗಾರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡಿದ್ದಲ್ಲದೆ ಕಾಮಗಾರಿಗೆ ತಡೆ ಹಾಕಿದ್ದಾರೆ.

ಯಾವುದೇ ಅಭಯಾರಣ್ಯ ವ್ಯಾಪ್ತಿಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಹೀಗಿದ್ದರೂ ಭದ್ರಾ ಬಫರ್ ಝೋನ್ ವ್ಯಾಪ್ತಿಯಲ್ಲಿ ರೆಸಾರ್ಟ್ ಕಾಮಗಾರಿ ರಾಜಾರೋಷವಾಗಿ ನಡೆಯುತ್ತಿತ್ತು. ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗೆ ಇದು ತಿಳಿದಿದ್ದರೂ ರೆಸಾರ್ಟ್ ಪ್ರಭಾವಿಗಳಿಗೆ ಸೇರಿದ್ದು ಎಂಬ ಕಾರಣಕ್ಕೆ ಕಣ್ಮುಚ್ಚಿ ಕುಳಿತಿದ್ದರು.

ಇದೀಗ ರೆಸಾರ್ಟ್ ಕಾಮಗಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿಷಯ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಭದ್ರಾ ನಿರ್ದೇಶಕ ಪುಲ್ಕಿತ್ ಮೀನಾ ಕೊಳಗಾಮೆಯ ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡಿ ಉತ್ತರಿಸಲು ಸೂಚಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅನುಮತಿ ಬಗ್ಗೆ ಮಾಹಿತಿಗೆ ಸೂಚನೆ ನೀಡಲಾಗಿದೆ. ಅವರಿಂದ ಉತ್ತರ ಬಂದಾಕ್ಷಣ ಮುಂದಿನ ಕ್ರಮ ಜರುಗಿಸುವುದಾಗಿ ಪುಲ್ಕಿತ್ ಮೀನಾ ಮಾಹಿತಿ ನೀಡಿದ್ದಾರೆ.

ನಿರಪೇಕ್ಷಣಾ ಪತ್ರವನ್ನೇ ಪಡೆದಿಲ್ಲ?:

ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣವಾಗುತ್ತಿತ್ತು. ಇದು ಒಂದು ಕಡೆ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಆಗಿದ್ದು, ಮತ್ತೊಂದು ಕಡೆ ಸೂಕ್ಷ್ಮಪ್ರದೇಶವಾಗಿದೆ. ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯದೆ ಕಾನೂನಿನ ವಿರೋಧವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ ಎನ್ನಲಾಗುತ್ತಿದೆ. ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆ ಆಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಇದುವರೆಗೆ ಕ್ರಮ ಕೈಗೊಂಡಿಲ್ಲ.

ಕಾಂಗ್ರೆಸ್ ಮುಖಂಡ, ರಾಜ್ಯ ಕಾಂಗ್ರೆಸ್ ಪಕ್ಷದ ಮಾಜಿ ಖಜಾಂಜಿ ವಿನಯ್ ಕಾರ್ತಿಕ್ ಪ್ರಕಾಶ್, ಚಂದ್ರ ಪ್ರಕಾಶ್ ಅಕ್ರಮವಾಗಿ, ಅರಣ್ಯ ಇಲಾಖೆಯ ನಿಯಮಗಳನ್ನು ಮೀರಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶೋಲಾ ಅರಣ್ಯದ ಅಪರೂಪದ ಸಸ್ಯ ಸಂಪತ್ತು ಇರುವ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ 50 ಕೋಟಿ ರು. ಗೂ ಹೆಚ್ಚು ಮೌಲ್ಯದ ರೆಸಾರ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಪರಿಸರ ಪ್ರೇಮಿಗಳ ಆಕ್ರೋಶ

ಕೊಳಗಾಮೆ ಗ್ರಾಮದ ವ್ಯಾಪ್ತಿಯ ಗುಡ್ಡ ನಾಶ ಮಾಡಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಪರಿಸರ ನಾಶದ ಜತೆಗೆ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ವಿನಯ್ ಕಾರ್ತಿಕ್, ಚಂದ್ರ ಪ್ರಕಾಶ್ 2020ರಲ್ಲಿ ಕೊಳಗಾಮೆ ಗ್ರಾಮದಲ್ಲಿ 4.32 ಎಕರೆ ಕಾಫಿತೋಟವನ್ನು ಖರೀದಿ ಮಾಡಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ 2020ರಲ್ಲಿ ಅಂದಿನ ಜಿಲ್ಲಾಧಿಕಾರಿ ಭೂ ಪರಿವರ್ತನೆ ಮಾಡಿದ್ದಾರೆ. ಕಳೆದ ನವೆಂಬರ್‌ನಿಂದ ಕಾಮಗಾರಿ ಆರಂಭಿಸಲಾಗಿದೆ. ಆದರೆ ಇವರು ಮಾಡುವ ರೆಸಾರ್ಟ್ ಬಳಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್, ಪರಿಸರ ಸೂಕ್ಷ್ಮಪ್ರದೇಶಗಳು ಇದೆ. ಇಲ್ಲಿ ಯಾವುದೇ ಬೃಹತ್ ಕಟ್ಟಡ ನಿರ್ಮಾಣ, ಗಣಿಗಾರಿಕೆ ನಡೆಸುವಂತಿಲ್ಲ. ನಿಯಮಗಳ ಪ್ರಕಾರ ಬಫರ್ ಝೋನ್ ವ್ಯಾಪ್ತಿಯ 10 ಕಿಮೀವರೆಗೂ ಬೃಹತ್ ಕಟ್ಟಡ ನಿರ್ಮಾಣ ,ಗಣಿಗಾರಿಕೆಗೆ ನಿರ್ಬಂಧವಿದೆ. ರೆಸಾರ್ಟ್ ಕಾಮಾಗಾರಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪರಿಸರ ಪ್ರೇಮಿ ವಿರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲ್‌ ಟಿಕೆಟ್‌ ಸಿಗದೆ 25 ವಿದ್ಯಾರ್ಥಿಗಳು ಪರೀಕ್ಷೆ ವಂಚಿತ
ನೈತಿಕ ಮೌಲ್ಯ ಕಾಪಾಡಿದ ಅವಿಭಕ್ತ ಕುಟುಂಬಗಳು