ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ

KannadaprabhaNewsNetwork |  
Published : Mar 25, 2026, 02:15 AM IST
ಮಾಸಿಕ ಕೆಡಿಪಿ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿದರು. | Kannada Prabha

ಸಾರಾಂಶ

ಸಭೆ ನಿಗದಿಪಡಿಸಿದ ಬಗ್ಗೆ ಮುಂಚಿತವಾಗಿಯೇ ತಾಲೂಕು ಪಂಚಾಯಿತಿ ವತಿಯಿಂದ ಸಭೆಯ ನೋಟಿಸ್ ನೀಡಲಾಗಿದ್ದರೂ ಇಲಾಖೆಯ ಅಧಿಕಾರಿಗಳು ಯಾರ ಅನುಮತಿಯನ್ನು ಪಡೆಯದೇ ಪದೇ ಪದೇ ಗೈರು ಉಳಿಯುತ್ತಿರುವುದು ಸರಿಯಾದ ಕ್ರಮವಲ್ಲ.

ಶಿರಹಟ್ಟಿ: ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ, ಬಿಇಒ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ, ೧೫ನೇ ಹಣಕಾಸು ಯೋಜನೆ ಅನುದಾನ ಬಳಕೆ ಮಾಡದೇ ಇರುವ ಗ್ರಾಪಂ ಪಿಡಿಒಗಳಿಗೆ ತಾಕೀತು...

- ಇದು ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು. ತಾಲೂಕಿನ ಅಭಿವೃದ್ದಿ ಕುರಿತು ಚರ್ಚಿಸಬೇಕಿದ್ದ ಸಭೆಗೆ ೨೮ ಇಲಾಖೆಗಳ ಪೈಕಿ ಕೇವಲ ೬ ಜನ ಅಧಿಕಾರಿಗಳು ಹಾಜರಾಗಿರುವುದನ್ನು ಕಂಡ ಅಧಿಕಾರಿಗಳ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ಶಿರಹಟ್ಟಿ ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅವರು, ಗೈರು ಉಳಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದರು.

ಸಭೆ ನಿಗದಿಪಡಿಸಿದ ಬಗ್ಗೆ ಮುಂಚಿತವಾಗಿಯೇ ತಾಲೂಕು ಪಂಚಾಯಿತಿ ವತಿಯಿಂದ ಸಭೆಯ ನೋಟಿಸ್ ನೀಡಲಾಗಿದ್ದರೂ ಇಲಾಖೆಯ ಅಧಿಕಾರಿಗಳು ಯಾರ ಅನುಮತಿಯನ್ನು ಪಡೆಯದೇ ಪದೇ ಪದೇ ಗೈರು ಉಳಿಯುತ್ತಿರುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಇಲಾಖೆಯ ಕಚೇರಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು. ಪಿಡಿಒಗಳು ನಿರ್ಲಕ್ಷ್ಯ ವಹಿಸಬೇಡಿ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿ ೪೧,೨೬,೧೬೪, ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯಲ್ಲಿ ೩೧,೧೮,೭೯೭, ಛಬ್ಬಿ ೬,೩೫೨-೦೦, ಹೆಬ್ಬಾಳ ೪,೨೬,೪೯೮, ಇಟಗಿ ೨೦,೩೮,೦೬೧, ಕಡಕೋಳ ೩,೨೬೧, ಕೋಗನೂರ ೪,೧೫,೭೮೩, ಕೊಂಚಿಗೇರಿ ೨,೮೭,೧೬೨, ಮಾಚೇನಹಳ್ಳಿ ೨,೮೩,೫೪೧, ಮಾಗಡಿ ೧೦,೧೩,೩೪೪, ಮಜ್ಜೂರ ೮,೬೩,೩೪೩, ರಣತೂರ ೩,೦೭,೪೪೩, ತಾರೀಕೊಪ್ಪ ೨೫,೮೦,೨೧೬, ವಡವಿ ೭,೨೦,೮೫೯ ಕ್ರಿಯಾಯೋಜನೆ ಅನುಮೋದನೆಗೊಂಡಿದ್ದರೂ ಅನುದಾನ ಬಳಕೆಯಾಗದೇ ಇರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.ಸರ್ಕಾರದ ಅನುದಾನ ಸದುಪಯೋಗಪಡಿಸಿಕೊಳ್ಳಲು ಇಚ್ಛಾಶಕ್ತಿ ಪ್ರದರ್ಶಿಸಿ ಅನುದಾನ ಬಳಕೆ ಮಾಡಿ, ನಿಮ್ಮ ಪಂಚಾಯಿತಿ ಪಾಸ್ ಬುಕ್ ತರಲು ಹೇಳಿದರೂ ಯಾರೊಬ್ಬರೂ ತರದೇ ಇರುವುದಕ್ಕೆ ಕಾರಣ ಏನು? ಹೀಗಾದರೆ ಏನು ಚರ್ಚೆ ಮಾಡಬೇಕು? ಮುಂದಿನ ಬಾರಿ ಗದುಗಿನಲ್ಲಿ ಪ್ರತ್ಯೇಕವಾಗಿ ಶಿರಹಟ್ಟಿ ತಾಲೂಕಿನ ಸಭೆ ನಡೆಸಲಾಗುವುದು ಎಂದು ಕಂಬಾಳಿಮಠ ತಾಲೂಕಿನ ಪಿಡಿಒಗಳಿಗೆ ಹೇಳಿದರು.೧೦ ಗ್ರಾಮಗಳಿಗೆ ನೀರಿನ ಸಮಸ್ಯೆ: ತಾಲೂಕಿನ ಗ್ರಾಮಗಳಿಗೆ ಡಿಬಿಒಟಿ ಮೂಲಕ ಸಮರ್ಪಕವಾಗಿ ಕೂಡಿಯುವ ನೀರು ಸರಬರಾಜು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ೧೦ ಹಳ್ಳಿಗಳಲ್ಲಿ(ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ, ವರವಿ, ಚವಡಾಳ, ನವೇಬಾವನೂರು, ಮಾಚೇನಹಳ್ಳಿ, ಕೂಸಲಾಪುರ, ಶಿವಾಜಿನಗರ, ಮಾಗಡಿ, ಚೆನ್ನಪಟ್ಟಣ) ನೀರಿನ ಅಭಾವ ಉಂಟಾಗಬಹುದು.

ಈ ಗ್ರಾಮಗಳಲ್ಲಿ ಡಿಬಿಒಟಿ ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟು ಬೇರಾವುದೆ ಮಾರ್ಗಯಿಲ್ಲದಿರುವುದರಿಂದ ಕುಡಿಯುವ ನೀರಿನ ತೊಂದರೆ ಆಗಬಹುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಬಾಳಿಮಠ ಅವರು ಸಮಸ್ಯೆ ಬಂದಾಗ ಅದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂಬುದಾಗಿ ಈಗಲೆ ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಲು ಸೂಚಿಸಿದರು.ತಾಲೂಕು ಪಂಚಾಯಿತಿ ಕಾರ‍್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ, ಯೋಜನಾಧಿಕಾರಿ ಎಚ್.ಎ. ಕೊಂಡಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳು ಸಂಸ್ಕೃತಿ ಜೀವಾಳ
ಹಾವೇರಿ ಜಿಲ್ಲೆಯ ವಿವಿಧೆಡೆ ಆಲಿಕಲ್ಲು, ಗಾಳಿ ಸಹಿತ ಸುರಿದ ಮಳೆ