ಪರಿಸರ ನಾಶಪಡಿಸದೆ ಮೊಹರಂ ಆಚರಿಸಲು ಸೂಚನೆ

KannadaprabhaNewsNetwork |  
Published : Jul 11, 2024, 01:30 AM IST
೯ಕೆಎನ್‌ಕೆ-೧                                      ಕನಕಗಿರಿ ಪಟ್ಟಣದ ಹಳೇ ಪೊಲೀಸ್ ಠಾಣೆಯಲ್ಲಿ ಮೊಹರಂ ಶಾಂತಿಸಭೆಯಲ್ಲಿ ತಹಶೀಲ್ದಾರ ವಿಶ್ವನಾಥ ಮುರುಡಿ ಮಾತನಾಡಿದರು.  | Kannada Prabha

ಸಾರಾಂಶ

ಪರಿಸರ ನಾಶಪಡಿಸದೆ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಕನಕಗಿರಿಯ ಗೌರವ ಕಾಪಾಡಬೇಕು.

ಕನ್ನಡಪ್ರಭ ವಾರ್ತೆ ಕನಕಗಿರಿ

ಪರಿಸರ ನಾಶಪಡಿಸದೆ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಕನಕಗಿರಿಯ ಗೌರವ ಕಾಪಾಡಬೇಕು ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಸೂಚಿಸಿದರು.

ಪಟ್ಟಣದ ಹಳೇ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ನಾಶಪಡಿಸಿ ಹಬ್ಬ ಆಚರಿಸುವುದು ಕಾನೂನು ಬಾಹಿರವಾಗಿದ್ದು, ಅಲಾಯಿ ದೇವರ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಹಬ್ಬ ಆಚರಿಸಬೇಕು. ಪ್ರತಿಯೊಬ್ಬರು ಗಿಡಮರಗಳನ್ನು ಕಡಿಯುವುದಾಗಲಿ, ಜಾನುವಾರಗಳಿಗೆ ಹಿಂಸೆ ನೀಡುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸುಭಾಷ ಚಂದ್ರ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ಪರದಾಡಿದ ಪ್ರಸಂಗಗಳು ನಮ್ಮ ಕಣ್ಮುಂದಿವೆ. ಗಿಡಮರಗಳು ನಮ್ಮ ಜೀವವಾಗಿದ್ದು, ಅವುಗಳನ್ನು ಸಂರಕ್ಷಣೆ ಮಾಡಬೇಕೆ ವಿನಃ ನಾಶ ಮಾಡುವುದು ಕಾನೂನು ಬಾಹಿರವಾಗಿದ್ದು, ಅಲಾಯಿ ದೇವರಿಗೆ ನಾಲ್ಕು ಸಣ್ಣ ಕಟ್ಟಿಗೆ ತುಂಡುಗಳನ್ನು ಹಾಕಿ ಹರಿಕೆ ತೀರಿಸಿಕೊಳ್ಳಿ. ಯಾರೇ ಆಗಲಿ ಹಸಿ ಮರಗಳನ್ನು ಕಡಿಯಬೇಡಿ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ರಾಜಬೀದಿಯಲ್ಲಿ ರಸ್ತೆ ಅಗೆದು ಅಲಾಯಿ ಕುಣಿ ಅಗೆಯುವುದಕ್ಕೆ ಅನುಮತಿ ನೀಡಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೀಚಿಂಗ್ ಪೌಡರ್ ಸಿಂಪಡಿಸುವುದು, ಮಸೀದಿ, ದರ್ಗಾಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಹಾಗೂ ಒಣಗಿದ ಮರದ ತುಂಡುಗಳನ್ನು ರಾಸುಗಳಿಂದ ಎಳೆಸುವ ಬದಲು ವಾಹನಗಳಲ್ಲಿ ಏರಿ ಅಲಾಯಿ ಕುಣಿಗೆ ಅರ್ಪಿಸುವ ವ್ಯವಸ್ಥೆ ಆಗಬೇಕು ಎಂದು ಸಭೆಯಲ್ಲಿದ್ದ ಸಂಘಟಕರು ಅಭಿಪ್ರಾಯಪಟ್ಟರು.ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಪಂ ಇಒ ರಾಜಶೇಖರ, ಪಿಎಸ್‌ಐ ಲೋಕೇಶ, ಪ್ರಮುಖರಾದ ಶರಣಪ್ಪ ಭತ್ತದ, ದೊಡ್ಡ ಕನಕಪ್ಪ, ಸಣ್ಣ ಕನಕಪ್ಪ, ನಾಗರಾಜ ಬೊಂದಾಡೆ, ಮದರಸಾಬ ಸಂತ್ರಾಸ್, ಖಾದರಸಾಬ ಗುಡಿಹಿಂದಲ, ಹಜರತಹುಸೇನ್ ಮುಜಾವರ, ರವಿ ಭಜಂತ್ರಿ, ಅಯ್ಯನಗೌಡ ಅಳ್ಳಳ್ಳಿ, ಹನುಮಂತರೆಡ್ಡಿ ಮಹಲಿನಮನಿ, ಸುರೇಶ ಕುರುಗೋಡ ಸೇರಿದಂತೆ ಇತರರು ಇದ್ದರು.

ಸಂಪ್ರದಾಯ ಪಾಲಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಆದರೆ ಪರಿಸರ ನಾಶಪಡಿಸುವ ಸಂಪ್ರದಾಯ ಯಾರಿಗೂ ಶೋಭೆ ಅಲ್ಲ. ಪ್ರತಿಯೊಬ್ಬರು ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಐ ಎಂ.ಡಿ. ಪೈಜುಲ್ಲಾ ಎಚ್ಚರಿಸಿದ್ದಾರೆ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ