ಗ್ಯಾರಂಟಿ ಘೋಷಣೆಯಿಂದ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Jul 11, 2024, 01:30 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಜಾರಿಯಲ್ಲಿರುತ್ತವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚಾಮರಾಜನಗರದಲ್ಲಿ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದರು.

ನನ್ನ ಮತ್ತು ನಿಮ್ಮ ಸಂಬಂಧ 40 ವರ್ಷ ಹಳೆಯದ್ದು । ಚಾಮರಾಜನಗರ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಇರುವವರೆಗೂ ಜಾರಿಯಲ್ಲಿರುತ್ತವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಡಾ.ಬಿ.ಆರ್‌. ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ನನ್ನ ಮತ್ತು ನಿಮ್ಮ ಸಂಬಂಧ 40 ವರ್ಷಗಳಷ್ಟು ಹಳೆಯದು ಮತ್ತು ಗಟ್ಟಿತನದ್ದು. ನಿಮ್ಮ ಋಣ ನನ್ನ ಮೇಲಿದೆ. ಇನ್ನು ಅಭಿವೃದ್ಧಿ ಮಾಡುವುದು ಸಾಕಷ್ಟಿದೆ. ನಾನು ಅಧಿಕಾರಕ್ಕೆ ಬಂದಾಗಲೆಲ್ಲ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ. ಬಿಜೆಪಿಯವರು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ನಿರೀಕ್ಷೆಯಷ್ಟು ಸ್ಧಾನ ಗೆದ್ದಿದ್ದೇವೆ. ಮತ ಗಳಿಕೆ ಪ್ರಮಾಣ ಹೆಚ್ಚಿದೆ. ಬಿಜೆಪಿಯುವರು ಸೋತಿದ್ದಾರೆ ಎಂದರು.

ನೆಹರೂ ಅವಧಿಯಿಂದ ಇವತ್ತಿನವರೆಗೆ ಕಾಂಗ್ರೆಸ್ ನಿರಂತರವಾಗಿ ಸಮಾಜದ ಸಮಗ್ರ ಅಭಿವೃದ್ಧಿಗೆ, ಸರ್ವ ಜನರ ಪ್ರಗತಿ ಮತ್ತು ಸಾಮರಸ್ಯಕ್ಕಾಗಿ ಶ್ರಮಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ದಲಿತರು, ಮಹಿಳೆಯರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಕೊಡಬೇಕು ಎನ್ನುವುದು ನನ್ನ ಗುರಿಯಾಗಿದೆ. ಇದೇ ಕಾಂಗ್ರೆಸ್ ಪಕ್ಷದ ಆದ್ಯತೆಯೂ ಆಗಿದೆ ಎಂದರು.

ಈ ದೇಶದ ಸ್ವಾತಂತ್ರ್ಯಕ್ಕಾಗಿ ಅತಿ ಹೆಚ್ಚು ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡವರು ಕಾಂಗ್ರೆಸ್ಸಿಗರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಮಹಾತ್ಮಗಾಂಧಿ ಕರೆ ಕೊಟ್ಟಾಗ ಜನಸಂಘದವರು ಬ್ರಿಟಿಷರ ಜೊತೆ ಕೈಜೋಡಿಸಿದರೆ, ಉಳಿದ ಭಾರತೀಯರೆಲ್ಲರೂ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು ಎಂದು ಹೋರಾಟದ ದಿನಗಳನ್ನು ನೆನಪಿಸಿದರು.

ಸರ್ವ ಜಾತಿ ಜನಾಂಗಗಳ ಅನುಕೂಲಕ್ಕಾಗಿ ಕಾಂಗ್ರೆಸ್ ನಿರಂತರವಾಗಿ ಹಲವು ಭಾಗ್ಯಗಳನ್ನು ನೀಡುತ್ತಾ ಬಂದಿದೆ. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಐದು ಗ್ಯಾರಂಟಿಗಳನ್ನು ನಾಡಿನ ಜನತೆಯ ಮನೆ ಮನೆಗೆ ತಲುಪಿಸಿದ್ದೇವೆ. ಆದರೂ ಬಿಜೆಪಿಯವರು ನಿರಂತರ ಸುಳ್ಳುಗಳನ್ನು ಹುಟ್ಟು ಹಾಕುತ್ತಾ, ಗ್ಯಾರಂಟಿಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ನಾವು ನುಡಿದಂತೆ ನಡೆಯದಿದ್ದರೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 1.80 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಯವರು ದೇಶದ ಮತದಾರರನ್ನು ದಡ್ಡರು ಎಂದು ಬಿಂಬಿಸುತ್ತಿದ್ದಾರೆ. ಆದರೆ ನಮ್ಮ ಮತದಾರರು ದಡ್ಡರಲ್ಲ ಎಂದರು.

ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿದೆವು. ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಸ್ವಲ್ಪ ಹಣ ಬಿಡುಗಡೆ ಮಾಡಿತು. ಹೀಗಾಗಿ ಕೇಂದ್ರದಲ್ಲಿ ರಾಜ್ಯದ ಪರವಾಗಿ ಹೋರಾಟ ಮುಂದುವರೆಸಲು ಎಲ್ಲಾ 28 ಮಂದಿ ಸಂಸದರಿಗೆ ಸೂಚನೆ ನೀಡಿದ್ದೇವೆ ಎಂದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಜಮೀರ್ ಅಹಮದ್ ಖಾನ್, ಕೆ.ಹೆಚ್. ಮುನಿಯಪ್ಪ, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಸಿ.ಪುಟ್ಟರಂಗಶೆಟ್ಟಿ, ಎ.ಆರ್‌. ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ಎಚ್.ಎಂ.ಗಣೇಶ್ ಪ್ರಸಾದ್, ಡಾ.ತಿಮ್ಮಯ್ಯ, ಮಾಜಿ ಶಾಸಕರಾದ ನರೇಂದ್ರ, ಜಿ.ಎನ್‌. ನಂಜುಂಡಸ್ವಾಮಿ, ಎಸ್‌. ಜಯಣ್ಣ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಜಿಲ್ಲಾಧ್ಯಕ್ಷರಾದ ಪಿ. ಮಪಿಸ್ವಾಮಿ, ವಿಜಯಕುಮಾರ್ ಸೇರಿ‌ ಇತರೆ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ