ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ಗೆ ನೋಟಿಸ್

KannadaprabhaNewsNetwork |  
Published : Apr 02, 2025, 01:01 AM IST
01kpsmg11ಡಾ. ಮಹೇಶ್‌ ಜೋಷಿಕಸಾಪ ರಾಜ್ಯಾಧ್ಯಕ್ಷರು. | Kannada Prabha

ಸಾರಾಂಶ

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇರಿಸಬಾರದೇಕೆ ಎಂದು ಕಾರಣ ಕೇಳಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ನೀಡಿದ್ದ ನೋಟಿಸ್ ವಿರುದ್ಧ ಜಿಲ್ಲೆಯಾದ್ಯಂತ ಸಾಹಿತ್ಯಾಸಕ್ತರು, ಸಾಹಿತಿಗಳು, ಕನ್ನಡಪರ ಮನಸ್ಸುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನೋಟಿಸ್ ಅನ್ನು ತಕ್ಷಣ ವಾಪಸ್ಸು ಪಡೆಯವಂತೆ ಆಗ್ರಹಪಡಿಸಿದ್ದಾರೆ.

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇರಿಸಬಾರದೇಕೆ ಎಂದು ಕಾರಣ ಕೇಳಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ನೀಡಿದ್ದ ನೋಟಿಸ್ ವಿರುದ್ಧ ಜಿಲ್ಲೆಯಾದ್ಯಂತ ಸಾಹಿತ್ಯಾಸಕ್ತರು, ಸಾಹಿತಿಗಳು, ಕನ್ನಡಪರ ಮನಸ್ಸುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನೋಟಿಸ್ ಅನ್ನು ತಕ್ಷಣ ವಾಪಸ್ಸು ಪಡೆಯವಂತೆ ಆಗ್ರಹಪಡಿಸಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಡಿ.ಮಂಜುನಾಥ ಪರ ಅಭಿಯಾನವೊಂದು ಆರಂಭಗೊಂಡಿದೆ. ಮಂಜುನಾಥ ಅವರ ಕನ್ನಡ ಪರವಾದ ಕೆಲಸಗಳು ಪ್ರಶ್ನಾತೀತ. ಅವರ ಸಂಘಟನಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ವರ್ಷಪೂರ್ತಿ ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತಾದ ಹತ್ತು ಹಲವು ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಹೀಗಿರುವಾಗ ಇವರ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡಿರುವುದು ಸರಿಯಲ್ಲ ಎಂದು ಧ್ವನಿ ಎತ್ತಿದ್ದಾರೆ.ಜಿಲ್ಲಾಮಟ್ಟದಲ್ಲಿ ಮಾತ್ರವಲ್ಲ, ತಾಲೂಕು ಮಟ್ಟದಲ್ಲಿ ತಾಲೂಕು ಸಂಘಟನೆಗಳನ್ನು ಸದಾ ಜಾಗೃತ ಸ್ಥಿತಿಯಲ್ಲಿ ಇರಿಸುವಂತೆ ನೋಡಿಕೊಂಡು ತಾಲೂಕು, ಜಿಲ್ಲಾಮಟ್ಟದ ಸಮ್ಮೇಳನ ನಡೆಸುತ್ತಿದ್ದಾರೆ. ಸಾಹಿತ್ಯಾಸಕ್ತರನ್ನು ಒಂದುಗೂಡಿಸುತ್ತಿದ್ದಾರೆ. ಇವರ ಚಟುವಟಿಕೆಗಳನ್ನು ಪ್ರಶ್ನಿಸುವುದು ಸರಿಯಲ್ಲ. ಒಂದು ಪಕ್ಷ ಅವರು ತಪ್ಪು ತಾಂತ್ರಿಕವಾಗಿ ತಪ್ಪು ಮಾಡಿದ್ದರೆ ಅದಕ್ಕೆ ಸದಸ್ಯತ್ವ ಅಮಾನತ್ತು ಎಂಬ ಕ್ರಮ ಸರ್ವಾಧಿಕಾರಿ ಧೋರಣೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಡಾ.ಜೋಷಿಯವರ ಗುಂಪು ಒಂದು ಕಡೆಯಾಗಿದ್ದರೆ, ಮಂಜುನಾಥ್ ಇನ್ನೊಂದು ಕಡೆಯಲ್ಲಿ ನಿಂತು ಸ್ಪರ್ಧಿಸಿದ್ದರು. ಆದರೆ ಈ ದ್ವೇಷವನ್ನು ಮುಂದಿಟ್ಟುಕೊಂಡು ಇಂತಹ ನಡೆ ಪ್ರದರ್ಶಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ಹಾಗೆಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮಂಜುನಾಥ ಪರ ಇದ್ದಾರೆ ಎನ್ನುವಂತಿಲ್ಲ. ಅತ್ಯಂತ ಕಡಿಮೆ ಸಂಖ್ಯೆ ಜನ ಅಥವಾ ಒಂದಿಬ್ಬರು ಮಂಜುನಾಥ್ ವಿರುದ್ಧವೂ ಮಾತನಾಡಿದ್ದು, ಈ ರೀತಿ ನೋಟಿಸ್ ನೀಡಿದ್ದು ಸರಿ ಎಂದು ಹೇಳಿದ್ದಾರೆ. ಆದರೆ ದೊಡ್ಡ ಧ್ವನಿಯಲ್ಲಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಮಂಜುನಾಥ ಪರ ನಿಂತಿದ್ದಾರೆ. ಅವರನ್ನು ಬೆಂಬಲಿಸಿದ್ದಾರೆ. ಚುನಾವಣೆಯ ಬಳಿಕ ಈ ಹಿಂದೆ ಕೂಡ ಕೆಲವೊಂದು ವಿಚಾರದಲ್ಲಿ ಮಂಜುನಾಥ್ ಮತ್ತು ರಾಜ್ಯಾಧ್ಯಕ್ಷರ ನಡುವೆ ಸೂಕ್ಷ್ಮವಾಗಿ ಜಟಾಪಟಿ ನಡೆದಿತ್ತು.

ಯಾಕೆ ನೋಟೀಸ್?:ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಡಳಿತಾತ್ಮಕ ಸುಧಾರಣೆ ತರಲು ಕಾಲಕ್ಕೆ ತಕ್ಕಂತೆ ನಿಬಂಧನೆಗಳನ್ನು ಪರಿಷ್ಕರಿಸಲು, ನಿಬಂಧನೆಗಳಿಗೆ ತಿದ್ದುಪಡಿ ತರುವುದು ಅತ್ಯಾವಶ್ಯಕವಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾ.ಅರಳಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ 11 ಸದಸ್ಯರನ್ನೊಳಗೊಂಡ ತಿದ್ದುಪಡಿ ಸಲಹಾ ಸಮಿತಿಯನ್ನು ರಚಿಸಲಾಗಿತ್ತು. ತಿದ್ದುಪಡಿ ಸಲಹಾ ಸಮಿತಿ ಮಾಡಿದ್ದ ನಿಬಂಧನೆ ತಿದ್ದುಪಡಿ ಶಿಫಾರಸ್ಸು ಚರ್ಚೆಗೆ ಬರುವ ಮೊದಲೇ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ರಾಮಣ್ಣ ಎಚ್.ಕೋಡಿಹೊಸಹಳ್ಳಿ ಎಂಬುವವರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದರು. ಹೀಗೆ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳನ್ನು ಸಭೆಯಲ್ಲಿ ಚರ್ಚೆಯಾಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಂಜುನಾಥ್‌ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ತಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತಿನ ಮಾನ ಮಾರ್ಯಾದೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಾಜು ಮಾಡಿದ್ದಾರೆ ಎಂದು ಪರಿಷತ್‌ ಕೇಂದ್ರ ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದು, ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಭೆಯ ನಿರ್ಣಯದಂತೆ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಅವರ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಏಕೆ ಇರಿಸ ಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ