ಸರ್ಕಾರ ನೀಡಿದ ಮನೆಗಳೇ ಅಕ್ರಮವೆಂದು ತೆರವಿಗಾಗಿ ನೋಟಿಸ್‌!

KannadaprabhaNewsNetwork |  
Published : Jun 19, 2025, 12:34 AM IST
18ಡಿಡಬ್ಲೂಡಿ1ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮಸ್ಥರಿಗೆ ಗ್ರಾಪಂನಿಂದ ನೀಡಿರುವ ನೋಟಿಸ್‌ | Kannada Prabha

ಸಾರಾಂಶ

ಸುಮಾರು ವರ್ಷಗಳ ಹಿಂದೆ ವಿವಿಧ ವಸತಿ ಮತ್ತು ಆಶ್ರಯ ಯೋಜನೆಗಳಲ್ಲಿ ರಾಜ್ಯ ಸರ್ಕಾರವೇ ಹಂತ ಹಂತವಾಗಿ ಈ ಗ್ರಾಮದ ಬಡವರಿಗೆ ಮನೆ ನಿರ್ಮಿಸಿಕೊಟ್ಟಿದೆ. ಸರ್ಕಾರದ ಆಸರೆಯಲ್ಲಿಯೇ ಹತ್ತಾರು ವರ್ಷಗಳ ಕಾಲ ಬದುಕಿದ್ದ ಸುಮಾರು 120ಕ್ಕೂ ಹೆಚ್ಚು ಕುಟುಂಬಗಳ ಮನೆಗಳು ಇದೀಗ ಅತಿಕ್ರಮಣ ಜಾಗದಲ್ಲಿ ನಿರ್ಮಾಣವಾಗಿದ್ದು, ಕೂಡಲೇ ಖಾಲಿ ಮಾಡಬೇಕೆಂದು ಗ್ರಾಪಂ ನೋಟಿಸ್‌ ಮೇಲೆ ನೋಟಿಸ್‌ ನೀಡಿದೆ.

ಬಸವರಾಜ ಹಿರೇಮಠ

ಧಾರವಾಡ: ಒಂದೆಡೆ ರಾಜ್ಯ ಸರ್ಕಾರವು ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರವೇ ನೀಡಿದ ಆಶ್ರಯ ಮನೆಗಳು ಇದೀಗ ಅಕ್ರಮ ಎಂದು ಮನೆ ಮಾಲೀಕರಿಗೆ ನೋಟಿಸ್‌ ನೀಡಿ ಒಕ್ಕಲೆಬ್ಬಿಸಲು ಮುಂದಾದ ಘಟನೆ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ಅರ್ಧ ಊರಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಿಂದ ಬಂದ ನೋಟಿಸ್‌ ಓದಿ ತೀವ್ರ ಕಳವಳಗೊಂಡಿದ್ದಾರೆ.

ಸುಮಾರು ವರ್ಷಗಳ ಹಿಂದೆ ವಿವಿಧ ವಸತಿ ಮತ್ತು ಆಶ್ರಯ ಯೋಜನೆಗಳಲ್ಲಿ ರಾಜ್ಯ ಸರ್ಕಾರವೇ ಹಂತ ಹಂತವಾಗಿ ಈ ಗ್ರಾಮದ ಬಡವರಿಗೆ ಮನೆ ನಿರ್ಮಿಸಿಕೊಟ್ಟಿದೆ. ಸರ್ಕಾರದ ಆಸರೆಯಲ್ಲಿಯೇ ಹತ್ತಾರು ವರ್ಷಗಳ ಕಾಲ ಬದುಕಿದ್ದ ಸುಮಾರು 120ಕ್ಕೂ ಹೆಚ್ಚು ಕುಟುಂಬಗಳ ಮನೆಗಳು ಇದೀಗ ಅತಿಕ್ರಮಣ ಜಾಗದಲ್ಲಿ ನಿರ್ಮಾಣವಾಗಿದ್ದು, ಕೂಡಲೇ ಖಾಲಿ ಮಾಡಬೇಕೆಂದು ಗ್ರಾಪಂ ನೋಟಿಸ್‌ ಮೇಲೆ ನೋಟಿಸ್‌ ನೀಡಿದೆ.

ಕಾರಣವೇನು?: ಕುರುಬಗಟ್ಟಿ ಗ್ರಾಮದ ಸರ್ವೇ ನಂಬರ್ 22ರಲ್ಲಿ ಇರುವ ಒಟ್ಟು 120 ಮನೆಗಳಿಗೆ ಗ್ರಾಮ ಪಂಚಾಯಿತಿ 2ನೇ ಬಾರಿಗೆ ನೋಟಿಸ್‌ ನೀಡಿದೆ. ಈಗ ನೋಟಿಸ್‌ ನೀಡಿರುವ ಮನೆಗಳ ಜಾಗದಲ್ಲಿ ಈ ಹಿಂದೆ ಕೆರೆ ಇತ್ತು. ಕೆರೆ ಜಾಗದಲ್ಲಿ ಮನೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಆದೇಶದಂತೆ ನಾವು ಆ ಸರ್ವೇ ನಂಬರಿನ ಎಲ್ಲ ಮನೆಗಳಿಗೆ ನೋಟಿಸ್‌ ನೀಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ, ನಾಲ್ಕು ದಶಕಗಳಿಂದ ಸರ್ಕಾರದ ಆಶ್ರಯ ಮನೆಗಳಲ್ಲಿ ವಾಸಿಸುತ್ತಿದ್ದು, ಇಲ್ಲಿ ಕೆರೆಯ ಬಗ್ಗೆ ನಮಗೆ ಮಾಹಿತಿ ಇಲ್ಲ. ಏಕಾಏಕಿ ನೋಟಿಸ್‌ ನೀಡಿ ಮನೆಗಳನ್ನು ತೆರವುಗೊಳಿಸಿ ಎಂದರೆ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಸರ್ಕಾರಿ ಕಟ್ಟಡಗಳೂ ಇವೆ: ಅಚ್ಚರಿ ಸಂಗತಿ ಏನೆಂದರೆ, ಇದೇ ಸರ್ವೇ ನಂಬರ್ 22ರಲ್ಲಿ ಬರೀ 120 ಮನೆಗಳು ಮಾತ್ರವಲ್ಲದೇ ಸರ್ಕಾರಿ ಆರೋಗ್ಯ ಕೇಂದ್ರ, ಅಂಬೇಡ್ಕರ್ ಭವನ, ಅಂಗನವಾಡಿ, ಮೂರು ದೇವಸ್ಥಾನಗಳು, ಮೂರು ಓವರ್‌ ಹೆಡ್ ಟ್ಯಾಂಕ್ ಕೂಡ ಇವೆ. ಸರ್ಕಾರದ ವಿವಿಧ ಕಟ್ಟಡಗಳನ್ನೂ ಇದೇ ಸರ್ವೆ ನಂಬರ್‌ನ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಜತೆಗೆ ಸಿಸಿ ರಸ್ತೆಗಳಾಗಿ ಹಲವು ವರ್ಷಗಳೇ ಕಳೆದಿವೆ. ಈಗ ಅಕ್ರಮ, ಅತಿಕ್ರಮಣ ಎನ್ನುವ ಸರ್ಕಾರವೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದೆ. ಮನೆಗಳನ್ನು ತೆರವುಗೊಳಿಸಿದಂತೆ ಸರ್ಕಾರದ ಕಟ್ಟಡಗಳಿಗೂ ನೋಟಿಸ್‌ ನೀಡಿ ತೆರವುಗೊಳಿಸುತ್ತಾರಾ? ಎಂದು ಗ್ರಾಮಸ್ಥರು ಗ್ರಾಪಂಗೆ ಪ್ರಶ್ನಿಸಿದರು.

ಅರ್ಧ ಊರೇ ಖಾಲಿ: ಈಗ ನೋಟಿಸ್‌ ನೀಡಿರುವ 120 ಮನೆಗಳು ಅಂದರೆ ಸರಿಸುಮಾರು ಅರ್ಧ ಊರೇ ಖಾಲಿಯಾಗಲಿದೆ. ಬಡವರೆಂದೇ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಇದೀಗ ಮನೆ ಖಾಲಿ ಮಾಡಿ ಎಂದರೆ ಅವರೀಗ ಎಲ್ಲಿಗೆ ಹೋಗಬೇಕು? ಸರ್ಕಾರ ಮೊದಲೇ ಈ ಜಾಗ ಅಕ್ರಮ ಎಂದು ಕೈ ಬಿಡಬಹುದಿತ್ತು. ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುವುದು ಯಾವ ನ್ಯಾಯ. ತಹಸೀಲ್ದಾರರು, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಲೋಕಾಯುಕ್ತ ಅಧಿಕಾರಿಗಳೆಲ್ಲರೂ ಸೇರಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು. ಇಲ್ಲದೇ ಹೋದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾದೀತು ಎಂದು ನೋಟಿಸ್‌ ಪಡೆದುಕೊಂಡಿರುವ ಮಕ್ತುಂಬಿ ನದಾಫ್, ದ್ಯಾಮವ್ವ ಶಿರಹಟ್ಟಿ ''''ಕನ್ನಡಪ್ರಭ''''ಕ್ಕೆ ಪ್ರತಿಕ್ರಿಯಿಸಿದರು.

ಹೇಗಾದರೂ ಮಾಡಿ ಉಳಿಸಿಕೊಡಿ: ಹತ್ತಾರು ವರ್ಷಗಳಿಂದ ಸರ್ಕಾರವೇ ಕೊಟ್ಟಿರುವ ಮನೆಗಳಲ್ಲಿ ಬದುಕುತ್ತಿದ್ದೇವೆ. ಈಗ ಬಿಟ್ಟು ಹೋಗಿ ಅಂದರೆ ಎಲ್ಲಿಗೆ ಹೋಗಬೇಕು? ಸರ್ವೇ ನಂಬರ್‌ 22ರಲ್ಲಿ ಕೆರೆ ಇತ್ತು ಎಂಬುದನ್ನು ನಾವಂತೂ ನೋಡಿಲ್ಲ. ಈಗ ಲೋಕಾಯುಕ್ತ ದೂರಿದೆ ಎಂದು ಗ್ರಾಪಂನವರು ಏಕಾಏಕಿ ಮನೆ ಖಾಲಿ ಮಾಡಿ ಎಂದು ನೋಟಿಸ್‌ ನೀಡಿದರೆ ಎಲ್ಲಿಗೆ ಹೋಗಬೇಕು? ನಮ್ಮ ಮನೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಗ್ರಾಮಸ್ಥ ಬಾಳಪ್ಪ ಹೊಳೆಯಪ್ಪನವರ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!