ಹುಬ್ಬಳ್ಳಿ: ಆದಷ್ಟು ಶೀಘ್ರವೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 2019ರ ಅಧಿಸೂಚನೆಯಂತೆ ಚಾಲಕ- ನಿರ್ವಾಹಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಭರವಸೆ ನೀಡಿದ್ದಾರೆ.
ವಾಯವ್ಯ ಸಾರಿಗೆ ಸಂಸ್ಥೆಯ ತಮ್ಮ ಕಚೇರಿಯಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.ಈಗಾಗಲೇ ಅಭ್ಯರ್ಥಿಗಳು ತಮಗೆ ಮನವಿ ಸಲ್ಲಿಸಿದ್ದಾರೆ. 1000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇನ್ನೂ 1000 ಅಭ್ಯರ್ಥಿಗಳನ್ನು 2019ರ ಅಧಿಸೂಚನೆಯಂತೆ ನೇಮಕಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಇರುವ ಸಮಸ್ಯೆಗಳನ್ನು ನಿವಾರಿಸಲಾಗುವುದು. ಮಂಗಳವಾರ ನಾನು ಮತ್ತು ಸಂಸ್ಥೆ ಎಂಡಿ ಅವರು ಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದರು. ಸಂಸ್ಥೆಗೆ ಇನ್ನೂ ಹೆಚ್ಚಿನ ಸಂಖ್ಯೆಯ ಡ್ರೈವರ್‌ಗಳ ಅವಶ್ಯಕತೆ ಇದ್ದು, ಈ ಕುರಿತಂತೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಹೋರಾಟಗಾರರ ಮನವಿ: ಈಗಾಗಲೇ ಆದೇಶ ಹೊರಡಿಸಿದಂತೆ 2814 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಸಂಸ್ಥೆಯ ಅಧ್ಯಕ್ಷ ಕಾಗೆ ಅವರಿಗೆ ಅಭ್ಯರ್ಥಿಗಳು ಮನವಿ ಸಲ್ಲಿಸಿದರು. ವಾಯವ್ಯ ಸಾರಿಗೆಗೆ ₹2100 ಕೋಟಿ ಬಾಕಿ!ಹುಬ್ಬಳ್ಳಿ:
ಶಕ್ತಿ ಯೋಜನೆಯಡಿ ಸರ್ಕಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹674 ಕೋಟಿ ಹಣ ಮರುಪಾವತಿ ಮಾಡಬೇಕಿದೆ. ಒಟ್ಟಾರೆ ನಿಗಮಕ್ಕೆ ₹2100 ಕೋಟಿ ಬಾಕಿ ಸರ್ಕಾರದಿಂದ ಬರಬೇಕಿದೆ ಎಂದು ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಜೂನ್ 11, 2023ರಿಂದ ಮೇ 2025ರ ವರೆಗೆ ₹29,15,69,09,525 ವೆಚ್ಚವಾಗಿದೆ. ಇದರಲ್ಲಿ ಸರ್ಕಾರ ಸಂಸ್ಥೆಗೆ ₹22,41,06,75,000 ಪಾವತಿಸಿದ್ದು, ₹6,74,62,34,525 ಬಾಕಿ ಉಳಿಸಿಕೊಂಡಿದೆ. ಯೋಜನೆಯಡಿ ವೆಚ್ಚವಾದ ಶೇ. 76ರಷ್ಟು ಹಣ ಪಾವತಿಸಿದಂತಾಗಿದೆ. ಇದೇ ವೇಳೆ, ಭವಿಷ್ಯನಿಧಿ ₹1199 ಕೋಟಿ, ನಿವೃತ್ತ ನೌಕರರ ಬಾಕಿ ₹64.30 ಕೋಟಿ, ಸಿಬ್ಬಂದಿಗೆ ಬಾಕಿ ವೇತನ ₹45.53 ಕೋಟಿ, ಇಂಧನ ಬಾಕಿ ₹92.64 ಕೋಟಿ ಸೇರಿದಂತೆ ಒಟ್ಟು ₹1550.69 ಕೋಟಿ ಬಾಕಿ ಉಳಿಸಿಕೊಂಡಿದೆ. ಶಕ್ತಿ ಯೋಜನೆ ಮತ್ತು ಇತರೆ ಬಾಕಿ ಸೇರಿ ಸರ್ಕಾರ ಸುಮಾರು ₹2100 ಕೋಟಿ ಬಾಕಿ ಉಳಿಸಿಕೊಂಡಿದೆ. ಇಷ್ಟು ಹಣ ಬಾಕಿ ಉಳಿದಿರುವುದರಿಂದ ಸಾರಿಗೆ ಸಂಸ್ಥೆಯ ನಿರ್ವಹಣೆಗೆ ಸಮಸ್ಯೆ ಆಗಿದ್ದು, ಬಾಕಿ ಬಿಡುಗಡೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.ಸರ್ಕಾರಿ ನೌಕರರಂತೆ: ಸಾರಿಗೆ ಸಂಸ್ಥೆ ನೌಕರರು ಶ್ರಮಜೀವಿಗಳು. ಅವರಿಗೂ ಸರ್ಕಾರದ ಇತರ ಇಲಾಖೆ ನೌಕರರಂತೆ ವೇತನ ಸಿಗಬೇಕು ಎನ್ನುವುದು ನನ್ನ ನಿಲುವು. ಈ ಕುರಿತಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಸರ್ಕಾರ ಇತರ ಇಲಾಖೆಯ ನಿವೃತ್ತ ನೌಕರರು ಪಡೆಯುವ ಪಿಂಚಣಿಯಷ್ಟೂ ಸಾರಿಗೆ ಇಲಾಖೆ ಸಿಬ್ಬಂದಿ ವೇತನವಿಲ್ಲ. ಈ ತಾರತಮ್ಯ ನಿವಾರಣೆಯಾಗಬೇಕಾದರೆ ಸಾರಿಗೆ ನೌಕರರನ್ನು ವೇತನ ಆಯೋಗದಡಿ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಮುಖ್ಯ ಸಂಚಾರಿ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಇತರರಿದ್ದರು.