ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ ಮುಖ್ಯ

KannadaprabhaNewsNetwork |  
Published : Jun 18, 2025, 11:50 PM IST
ಶಿಸ್ತು, ತಾಳ್ಮೆ | Kannada Prabha

ಸಾರಾಂಶ

ಕಲಿಯುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ ಮತ್ತು ಶ್ರಮ ಈ ಮೂರು ಪ್ರಮುಖ ಅಂಶಗಳಾಗಿದ್ದು, ಯಾರು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ಮುಂದೆ ಬರಲು ಸಾಧ್ಯವಿದೆ ಎಂದು ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಿಷಾರಾಣಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಕಲಿಯುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ ಮತ್ತು ಶ್ರಮ ಈ ಮೂರು ಪ್ರಮುಖ ಅಂಶಗಳಾಗಿದ್ದು, ಯಾರು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ಮುಂದೆ ಬರಲು ಸಾಧ್ಯವಿದೆ ಎಂದು ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಿಷಾರಾಣಿ ಅಭಿಪ್ರಾಯಪಟ್ಟರು.

ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ದತ್ತಿ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬಹುಬೇಗ ಎಲ್ಲವೂ ಸಿಗಬೇಕೆನ್ನುವ ಆತುರ ವಿದ್ಯಾರ್ಥಿಗಳಲ್ಲಿ ಇರಬಾರದು. ಕಲಿಯುವ ದಿನಗಳಲ್ಲಿ ಶಿಸ್ತು ಮತ್ತು ಶ್ರಮ ಇರಬೇಕು. ಇದರ ಜೊತೆಗೆ ತಾಳ್ಮೆಯೂ ಇರಬೇಕು. ಆಗ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು.

ಗುರುಗಳ ಆಶೀರ್ವಾದ ಇಲ್ಲದೆ ನಾವು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಕಾಲೇಜಿನ ದಿನಗಳಲ್ಲಿ ಸಂಸ್ಕಾರವಂತರಾಗಿದ್ದರೆ ಮುಂದಿನ ಭವಿಷ್ಯವೂ ಉತ್ತಮವಾಗಿರುತ್ತದೆ. ಅಂತಹ ಅವಕಾಶಗಳನ್ನು ನಾವು ಬಳಸಿಕೊಂಡಿದ್ದೇವೆ. ನಾವು ಕಲಿಯುವ ದಿನಗಳಲ್ಲಿ ಅವಕಾಶಗಳು ಸೀಮಿತವಾಗಿದ್ದವು. ಈಗ ವಿಶಾಲವಾದ ವ್ಯಾಪ್ತಿ ಇದೆ. ಎಲ್ಲವೂ ಅಂಗೈನಲ್ಲೇ ಸಿಗಲಿದೆ. ಮುಂದಿನ ದಿನಗಳಲ್ಲಿ ಶಿಸ್ತಿನಿಂದ ಜೀವನ ರೂಪಿಸಿಕೊಳ್ಳುವಂತಹ ಅವಕಾಶ ಎಲ್ಲರಿಗೂ ಒದಗಿ ಬರಲಿ ಎಂದು ಹಾರೈಸಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಶಿಕ್ಷಣವಲ್ಲ. ಈಗ ಪರಿಸ್ಥಿತಿ ಅದೇ ಆಗಿದೆ. ಆದರೆ ಇದನ್ನು ಮೀರಿದ ಶಿಕ್ಷಣ ಪಡೆಯಲು ಮುಂದಾಗಬೇಕು. ಕಾಲೇಜಿನ ಒಳಗೆ ಕಲಿಯುವ ಶಿಕ್ಷಣದ ಜೊತೆಗೆ ಹೊರಗಿನ ಶಿಕ್ಷಣವೂ ಮುಖ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಕಡೆಗೆ ಜನತೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಓದಿ ಕೆಲಸ ಸಿಕ್ಕಿದ ನಂತರ ಬಹಳಷ್ಟು ಜನ ಸ್ವಾರ್ಥಿಗಳಾಗುತ್ತಾರೆ. ಕಲಿತ ಶಾಲೆ ಮತ್ತು ಗುರುಗಳನ್ನು ಮರೆಯಬಾರದು. ಕೇವಲ ಸ್ವಂತ ಸಂಪಾದನೆಗೆ ಸೀಮಿತವಾಗಬಾರದು. ಸಮಾಜಕ್ಕೂ ಕೊಡುಗೆ ನೀಡಬೇಕು ಎಂದ ಅವರು, ದತ್ತಿ ನಿಧಿ ಸ್ಥಾಪನೆ ಒಂದು ಉತ್ತಮ ಕಾರ್ಯ. ಇದರಿಂದ ಸಂಬಂಧಗಳು ಹೆಚ್ಚುವುದಲ್ಲದೆ, ನೆನಪುಗಳು ಉಳಿಯುತ್ತವೆ ಎಂದರು.

ಸಿದ್ಧಗಂಗಾ ಪದವಿ ಕಾಲೇಜುಗಳ ಸಮೂಹದ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ ಈ ನಮ್ಮ ಸಂಸ್ಥೆಯಲ್ಲಿ ಕಲಿತ ಬಹಳಷ್ಟು ಹೆಣ್ಣು ಮಕ್ಕಳು ವಿವಿಧ ಹುದ್ದೆಗಳಲ್ಲಿದ್ದಾರೆ. ಅವರನ್ನು ನೋಡಿದರೆ ನಮಗೆ ಸಂತೋಷವಾಗುತ್ತದೆ ಎಂದರು.

ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಿ.ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಭಾ ಪುರಸ್ಕಾರ, ದತ್ತಿ ಬಹುಮಾನ ಇವೆಲ್ಲವೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾರ್ಗಗಳಾಗಿದ್ದು, ಇದನ್ನು ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನೀವೂ ಸಹ ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂಬ ಆಶಯ ನಮ್ಮದಾಗಿದೆ. ದತ್ತಿ ಪುರಸ್ಕಾರದ ಉದ್ದೇಶವು ಇದಾಗಿದ್ದು, ನೀವೂ ಸಹ ಹೀಗೆ ಬೆಳೆದಾಗ ನಮಗೆ ಸಂತೋಷವಾಗುತ್ತದೆ. ಅಂತಹ ದಿನಗಳು ನಿಮಗೂ ಬರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಟಿ.ಜಿ.ನಿಜಲಿಂಗಪ್ಪ, ನಟರಾದ ಜೂ.ವಿಷ್ಣುವರ್ಧನ್, ಜೂ.ಅಂಬರೀಶ್, ಸಂಚಾಲಕ ಬಿ.ಆರ್.ಚಂದ್ರಶೇಖರ್, ಸಹ ಸಂಚಾಲಕರಾದ ಬಸವಶೃತಿ ಸಿ.ಎಸ್., ವ್ಯವಸ್ಥಾಪಕ ಬಿ.ಜಿ.ಗಂಗಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ