ಬ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥರಿಗೆ ನೋಟಿಸ್

KannadaprabhaNewsNetwork | Published : Jul 10, 2024 12:32 AM

ಸಾರಾಂಶ

ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ಭೇಟಿ ನೀಡಿ ದರು.

ಕನ್ನಡಪ್ರಭ ವಾರ್ತೆ ಬೀದರ್:

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರ ಭೇಟಿ ವೇಳೆ ಹಲವು ನ್ಯೂನತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು ಜ್ಞಾಪನಾ ಪತ್ರ ಬರೆಯುವ ಮೂಲಕ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಜು.6 ರಂದು ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆಸ್ಪತ್ರೆಯ ಮಕ್ಕಳ ವಿಭಾಗ ಸೇರಿದಂತೆ ಸಂಬಂಧಿಸಿದ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಹಲವು ನ್ಯೂನತೆಗಳು, ಸಿಬ್ಬಂದಿ ನಿರ್ಲಕ್ಷತನವು ಬೆಳಕಿಗೆ ಬಂದಿತ್ತು.

ಕೋಸಂಬೆ ಅವರು ಎನ್‌ಐಸಿಯುಗೆ ಭೇಟಿ ನೀಡಿದಾಗ ಅಲ್ಲಿ ಮಕ್ಕಳ ತಜ್ಞರು ಇದ್ದಿರಲಿಲ್ಲ. ನಿಯಮಾನುಸಾರ ಇಲ್ಲಿ ದಿನದ 24 ಗಂಟೆ ತಜ್ಞರು ಇರಬೇಕಾಗುತ್ತದೆ. ವಾರ್ಡ್‌ನಲ್ಲಿದ್ದ ಮಕ್ಕಳ ವಿಭಾಗದ ಮುಖ್ಯಸ್ಥರು ಯಾವುದೇ ವಿಷಯ ಕುರಿತು ಸ್ಪಷ್ಟ ಮಾಹಿತಿ ನೀಡಿರಲಿಲ್ಲ.

ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ 18,000 ದಷ್ಟಿದೆ. ಈ ಪೈಕಿ 168 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಆದರೆ, ಎನ್‌ಆರ್‌ಸಿ ವಿಭಾಗದಲ್ಲಿ ಬರೀ ಮೂರು ಮಕ್ಕಳನ್ನು ದಾಖಲಿಸಲಾಗಿತ್ತು. ಈ ಪೈಕಿ ಒಂದು ಮಗು ವಿಭಾಗದಲ್ಲಿತ್ತು. ಎರಡು ಮಕ್ಕಳನ್ನು ಮಕ್ಕಳ ವಾರ್ಡ್‌ನಲ್ಲಿ ದಾಖಲು ಮಾಡಲಾಗಿತ್ತು ಎಂದು ಶಶಿಧರ ಕೋಸಂಬೆ ಮಾಹಿತಿ ನೀಡಿದ್ದಾರೆ.

ಒಂದೇ ಬೇಬಿ ವಾರ್ಮರ್‌ನಲ್ಲಿ ಎರಡು ಶಿಶುಗಳನ್ನು ಇರಿಸಲಾಗಿತ್ತು. 4-5 ಬೇಬಿ ವಾರ್ಮರ್‌ಗಳು ಖಾಲಿ ಇದ್ದು, ವೈಜ್ಞಾನಿಕವಾಗಿ ಚಿಕಿತ್ಸೆ ನೀಡಿರಲಿಲ್ಲ. ಡಬ್ಬಲ್ ಫೋಟೊಥೆರಪಿಯಲ್ಲಿ ಮೂರು ಮಕ್ಕಳನ್ನು ಇರಿಸಲಾಗಿತ್ತು. ಇದು ಅತ್ಯಂತ ಅಪಾಯಕಾರಿ. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಈ ವಿಷಯದಲ್ಲಿ ನಿರ್ಲಕ್ಷತನ ತೋರಿರುವದು ಗಂಭೀರ ಪ್ರಮಾದ ಎಂದು ಶಶಿಧರ ಕೋಸಂಬೆ ತಿಳಿಸಿದ್ದಾರೆ.ಕಾಂಗರೂ ಮದರ್ ಕೇರ್‌ನಲ್ಲೂ ಸುವ್ಯವಸ್ಥೆ ಇದ್ದಿರಲಿಲ್ಲ. ವಿಶೇಷವಾಗಿ ಅಪೌಷ್ಟಿಕ ಮಕ್ಕಳ ವಿಷಯದಲ್ಲಿ ಹೆಚ್ಚು ನರ್ಲಕ್ಷ್ಯ ತೋರಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿ ಎಲ್ಲ ಮಕ್ಕಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಶಶಿಧರ ಕೋಸಂಬೆ ಅವರು ಭೇಟಿ ನೀಡಿದಾಗ ಕಂಡು ಬಂದಿದ್ದ ನ್ಯೂನತೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ್ ಅವರು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಕುಂತಲಾ ಕೌಜಲಗಿ ಅವರಿಗೆ ಜ್ಞಾಪನ ಪತ್ರ ಬರೆದಿದ್ದಾರೆ. ನ್ಯೂನತೆಗಳಿಗೆ ಕಾರಣರಾದ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ. ಆಯೋಗದ ಸದಸ್ಯರು ಭೇಟಿ ನೀಡಿದ ವೇಳೆ ಕಂಡು ಬಂದಿದ್ದ ನ್ಯೂನತೆಗಳಿಗೆ ಸಂಬಂಧಿಸಿದಂತೆ ಎನ್‌ಐಸಿಯು ಮತ್ತು ಎನ್‌ಆರ್‌ಸಿ ನೋಡಲ್ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಸೂಚಿಸಿದ್ದಾರೆ.ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ್, ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಕುಂತಲಾ ಕೌಜಲಗಿ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರ ಉಪಸ್ಥಿತರಿದ್ದರು.

Share this article