೧೩,೫೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲು ಸೂಚನೆ

KannadaprabhaNewsNetwork |  
Published : Jul 30, 2024, 12:38 AM IST
ಫೋಟೊ: ೨೯ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ತಾಲೂಕಿನಲ್ಲಿ ಹಕ್ಕುಪತ್ರ ರಹಿತ ಎಲ್ಲ ೧೩,೫೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಕಾಲಹರಣ ಮಾಡುವುದು ಬೇಡ. ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹಕ್ಕುಪತ್ರಗಳನ್ನು ವಿತರಿಸುವ ನಿಟ್ಟಿನಲ್ಲಿ ಸಮಯ ನಿಗದಿ ಪಡಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.

ಹಾನಗಲ್ಲ: ತಾಲೂಕಿನಲ್ಲಿ ಹಕ್ಕುಪತ್ರ ರಹಿತ ಎಲ್ಲ ೧೩,೫೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಕಾಲಹರಣ ಮಾಡುವುದು ಬೇಡ. ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಹಕ್ಕುಪತ್ರಗಳನ್ನು ವಿತರಿಸುವ ನಿಟ್ಟಿನಲ್ಲಿ ಸಮಯ ನಿಗದಿ ಪಡಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು. ಹಾವೇರಿ ಜಿಲ್ಲಾಧಿಕಾರಿ, ಹಾನಗಲ್ಲ ತಹಸೀಲ್ದಾರ್ ಮತ್ತು ಭೂಮಾಪನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತಾಲೂಕಿನಲ್ಲಿ ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸರ್ಕಾರಿ ಮತ್ತು ಖಾಸಗಿ ನಿವೇಶನಗಳಲ್ಲಿ ಕಳೆದ ೩೦-೪೦ ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಸಾವಿರಾರು ಸಂಖ್ಯೆಯ ಕುಟುಂಬಗಳು ವಾಸಿಸುತ್ತಿವೆ. ಅಂಥ ೧೩,೫೦೦ ಕುಟುಂಬಗಳನ್ನು ಈಗಾಗಲೇ ಗುರುತಿಸಲಾಗಿದೆ. ಅತಿವೃಷ್ಟಿಯಿಂದ ಮನೆ ಹಾನಿಗೀಡಾದರೂ ಇವರಿಗೆ ಪರಿಹಾರ ಸಿಗುತ್ತಿಲ್ಲ, ಬ್ಯಾಂಕ್ ಸಾಲ ಸೇರಿದಂತೆ ಇತರ ಎಲ್ಲ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಇಂಥ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ತಾಲೂಕಿನಲ್ಲಿ ಈಗಾಗಲೇ ಹಕ್ಕುಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಸೂಚಿಸಿದರು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆ ಬಂದರೆ ತ್ವರಿತಗತಿಯಲ್ಲಿ ಸರಿಪಡಿಸಿಕೊಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೂ ಸೂಚಿಸಿದರು. ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನಲ್ಲಿ ೧೮ ಹೊಸ ಕಂದಾಯ ಗ್ರಾಮಗಳ ರಚನೆಗೆ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆಯೂ ಹೊರಬಿದ್ದಿದೆ. ಇನ್ನುಳಿದ ೫ ಕಂದಾಯ ಗ್ರಾಮಗಳಿಗೆ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ. ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ರಚಿಸಿ ಹಕ್ಕುಪತ್ರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಹಶೀಲ್ದಾರ್ ರೇಣುಕಾ ಎಸ್. ಮಾಹಿತಿ ನೀಡಿದರು.ನಿವೇಶನ ಸರ್ವೆ ಕೈಗೊಳ್ಳಲು ವಿಳಂಬ ಉಂಟಾಗುತ್ತಿರುವುದರಿಂದ ಈ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಹೆಚ್ಚುವರಿ ಸರ್ವೆಯರ್‌ಗಳನ್ನು ನಿಯೋಜಿಸಿ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಾಸಕ ಮಾನೆ ಸೂಚಿಸಿದರು.ಭೂಮಾಪನ ಇಲಾಖೆಯ ಉಪ ನಿರ್ದೇಶಕ ಮದನಕುಮಾರ ಇದ್ದರು.

PREV

Recommended Stories

ಯಜ್ಞೋಪವಿತ ಧಾರಣೆಯಿಂದ ಮಾನಸಿಕ, ದೈಹಿಕ ಆರೋಗ್ಯ-ಬಾಲಚಂದ್ರಶಾಸ್ತ್ರಿ
ಗಜೇಂದ್ರಗಡ ತಹಸೀಲ್ದಾರ್ ಕಾರ್ಯಾಲಯಕ್ಕೆ ಮಳೆ ನೀರಿನ ಕಾಟ!