ಕನ್ನಡಪ್ರಭ ವಾರ್ತೆ ಹಾನಗಲ್ಲ
ತಹಸೀಲ್ದಾರ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹತ್ತು ಹಲವು ವರ್ಷಗಳ ಹಿಂದೆಯೇ ಕಟ್ಟಡ, ಮನೆಗಳನ್ನು ನಿರ್ಮಿಸಿಕೊಂಡಿದ್ದರೂ ಕೂಡ ಅಂಥ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಲಾಗಿಲ್ಲ. ಹಕ್ಕುಪತ್ರ ನೀಡಿ, ಮನೆಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಇದ್ದರೂ ಸಹ ಈ ಕುರಿತು ಇದುವರೆಗೂ ಯಾರೊಬ್ಬರೂ ಗಮನ ಹರಿಸಿಲ್ಲ. ಇದರಿಂದಾಗಿ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಕೂಡಲೇ ಎಲ್ಲ ಪಿಡಿಒಗಳೊಂದಿಗೆ ಸಭೆ ನಡೆಸಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಮನೆಗಳ ಬಗೆಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಿ ಎಂದು ತಹಸೀಲ್ದಾರ್ ರೇಣುಕವ್ವಗೆ ಶ್ರೀನಿವಾಸ ಮಾನೆ ಸೂಚಿಸಿದರು.
ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆ ಯಾವ ಹಂತದಲ್ಲಿದೆ ಎನ್ನುವುದನ್ನು ಗಮನಿಸಿ. ಈಗಾಗಲೇ ಕೆಲ ಸರ್ಕಾರಿ ಜಮೀನು ಗ್ರಾಮ ಪಂಚಾಯಿತಿಗೆ ಹಸ್ತಾಂತರವಾಗಿರುವ ಬಗೆಗೆ ಮಾಹಿತಿ ಇದ್ದು, ಪರಿಶೀಲನೆ ಕೈಗೊಂಡು ಹಕ್ಕುಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದೂ ಮಾನೆ ಸೂಚನೆ ನೀಡಿದರು.ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒಗಳಿಂದ ವಿವರ ಮಾಹಿತಿ ಪಡೆದು, ಯಾವುದೇ ಮನೆಗಳೂ ಬಿಟ್ಟು ಹೋಗದಂತೆ ವರದಿ ಸಿದ್ಧಪಡಿಸಿ. ವರ್ಷದ ಒಳಗಾಗಿ ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕಾಳಜಿ ವಹಿಸಿ ಕೆಲಸ ನಿರ್ವಹಿಸಿ ಎಂದು ಶಾಸಕರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಪಂ ಇಒ ದೇವರಾಜ, ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಈ ಸಂದರ್ಭದಲ್ಲಿದ್ದರು.