ಹುಬ್ಬಳ್ಳಿ-ಅಂಕೋಲಾ ರೈಲ್ವೆಗೆ ಅಧಿಸೂಚನೆ: ಪರಿಷ್ಕೃತ ಯೋಜನೆ

KannadaprabhaNewsNetwork |  
Published : Aug 11, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಉತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿಮೀ ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ಸುಮಾರು ₹18,424 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ । 57 ಸುರಂಗ ನಿರ್ಮಿಸುವ ಪ್ರಸ್ತಾವ

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿಮೀ ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ಹಳೆಯ ಏಕಹಳಿ ಯೋಜನೆಗೆ ಬದಲಾಗಿ ಇದೀಗ ವಿದ್ಯುದೀಕೃತ ಬ್ರಾಡಗೇಜ್ ಡಬಲ್‌ಲೈನ್ ನಿರ್ಮಾಣದ ಪರಿಷ್ಕೃತ ಪ್ರಸ್ತಾವನೆ ರೂಪಿಸಲಾಗಿದೆ. ಸುಮಾರು ₹18,424 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಉದ್ದೇಶದಿಂದ 57 ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವವಿದೆ.

ಒಟ್ಟೂ 163 ಕಿಮೀ ಉದ್ದದ ಈ ಯೋಜನೆಗೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿ ಒಳಗೊಳ್ಳಲಿದೆ. ಅಧಿಸೂಚನೆ ಹೊರಡಿಸಲಾದ ಗ್ರಾಮಗಳ ವಿವರ ಹೀಗಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ನಗರಪಾಲಿಕೆ, ಬಿಂದಾಳ, ಗಬ್ಬೂರ, ಹಳಿಯಾಳ, ಕೊಟಗೊಂಡ ಹುಣಶಿ, ಅಜ್ಜನಪುರ, ಬುಡರಸಿಂಗಿ, ಮಾವನೂರ, ಗಿರಿಯಾಲ, ಕಾತನೂರ, ಚನ್ನಾಪುರ, ರಾಮಾಪುರ ಹಾಗೂ ಚಾವರಗುಡ್ಡ.

ಕಲಘಟಗಿ ತಾಲೂಕಿನ ಚಳಮಟ್ಟಿ, ಮಿಶ್ರಿಕೋಟಿ, ಉಗ್ಗಿನಕೇರಿ, ಕಾಮಧೇನು, ಹಾರೋಗೇರಿ, ರಾಮನಾಳ, ದಾಸ್ತಿಕೊಪ್ಪ, ಮಡ್ಕಿಹೊನ್ನಿಹಳ್ಳಿ, ಬೆಂಡಿಗೇರಿ, ಕಲಘಟಗಿ, ಮಚ್ಚಾಪುರ, ಗಳಗಿನಕಟ್ಟಿ, ದೇವಿಕೊಪ್ಪ, ಜುಂಜನಬೈಲ್, ತಂಬೂರ ಹಾಗೂ ಸಂಗಟಿಕೊಪ್ಪ.

ಉತ್ತರ ಕನ್ನಡದಲ್ಲಿ ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪದಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ್, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಹಾಗೂ ಮಾವಿನಮನೆ.

ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅಡ್ಲೂರ, ನವಗದ್ದೆ, ಬೊಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ.

ಆದರೆ ಹೊಸ ಅಧಿಸೂಚನೆ ಬಂದಿರುವುದರಿಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರ್ಥವಲ್ಲ. ಅರಣ್ಯ, ವನ್ಯಜೀವಿ ಹಾಗೂ ಇತರ ಅಗತ್ಯ ಅನುಮತಿಗಳು ಇನ್ನೂ ದೊರೆಯಬೇಕಿದೆ. ಆದರೂ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಹೊಸ ರೂಪದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವುದು ಉತ್ತರ ಕನ್ನಡದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ.ಅಧಿಸೂಚನೆ ಹೊರಡಿಸಿರುವುದರಿಂದ ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಯೋಜನೆ ಜಾರಿಯಾಗಲಿದೆ ಎಂದು ನಾನು ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಈ ರೈಲ್ವೇ ಮಾರ್ಗಕ್ಕೆ ಇನ್ನೂ ಹಲವು ಪರವಾನಿಗೆ ಬೇಕಾಗಲಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.ಜಾರ್ಜ್‌ ಫರ್ನಾಂಡಿಸ್ ಸಂತಸ:

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಿರುವುದು ಸಂತಸಕರ ಸಂಗತಿ ಎಂದು ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್‌ ಫರ್ನಾಂಡಿಸ್ ತಿಳಿಸಿದ್ದಾರೆ.ಬಹುಕಾಲದಿಂದ ಈ ರೈಲ್ವೆ ಮಾರ್ಗಕ್ಕಾಗಿ ಜಿಲ್ಲೆಯ ಜನತೆ ಕಂಡ ಕನಸು ಈಗ ಮೊಳಕೆಯೊಡೆಯುತ್ತಿದೆ.ರೈಲ್ವೆ ಮಾರ್ಗಕ್ಕಾಗಿ ಪ್ರಯತ್ನಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಸರೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
13ರಂದು ಬಾಗೇವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ