ಕುಖ್ಯಾತ ಬೈಕ್ ಕಳ್ಳನ ಬಂಧನ: 41 ವಾಹನ ವಶ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಹೊಸಕೋಟೆ: ಮನೆಯ ಮುಂದೆ ಹಾಗೂ ಪಾರ್ಕಿಂಗ್‌ಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ 35 ಲಕ್ಷ ಬೆಲೆ ಬಾಳುವ 41 ಬೈಕ್ ಗಳನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೊಸಕೋಟೆ:

ಮನೆಯ ಮುಂದೆ ಹಾಗೂ ಪಾರ್ಕಿಂಗ್‌ಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿ 35 ಲಕ್ಷ ಬೆಲೆ ಬಾಳುವ 41 ಬೈಕ್ ಗಳನ್ನು ಹೊಸಕೋಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ಮೂಲದ ಕಲೀಂ ಬಂಧಿತ ಆರೋಪಿ. ಆರೋಪಿಯಿಂದ 17 ಡಿಯೋ ಸ್ಕೂಟರ್, 4 ಜಾಜ್ ಡಿಸ್ಕವರಿ, 6 ಪಲ್ಸರ್ ಬೈಕ್, 5 ಸ್ಪ್ಲೆಂಡರ್ ಮೋಟಾರ್ ಸೈಕಲ್, 6 ಆಕ್ಟಿವಾ ಹೋಂಡಾ, 1 ರಾಯಲ್ ಎನ್ಫೀಲ್ಡ್, 1 ಯಮಹಾ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 41 ಪ್ರಕರಣಗಳನ್ನು ಹೊಸಕೋಟೆ ಪೊಲೀಸರು ಭೇದಿಸಿದ್ದಾರೆ.

ಆರೋಪಿ ಕಲೀಂ ಪಾಷಾ ಮಾಲೂರು ಟೌನ್ ನಲ್ಲಿ ಒಂದು ಪಂಚರ್ ಅಂಗಡಿಯಲ್ಲಿ 2 ವರ್ಷ ಕೆಲಸ ಮಾಡಿದ್ದ. ಆ ಸಮಯದಲ್ಲಿ ಸುತ್ತಮುತ್ತಲ ಜನರನ್ನ ಪರಿಚಯ ಮಾಡಿಕೊಂಡಿದ್ದು, ನಂತರ ಬೆಂಗಳೂರು ನಗರಕ್ಕೆ ಬಂದು ನೆಲೆಸಿದ್ದ. ಬೆಂಗಳೂರಿನಲ್ಲಿ ಆತನ ಸ್ನೇಹಿತ ಜಮೀಲ್ ಜೊತೆಗೆ ಸೇರಿಕೊಂಡು ಹೊಸಕೋಟೆ ಟೌನ್, ಮಾಲೂರು ಮತ್ತು ಬೆಂಗಳೂರು ನಗರ ಸೇರಿದಂತೆ ಪಾರ್ಕಿಂಗ್ ಸ್ಥಳಗಳಲ್ಲಿ, ಮನೆಗಳ ಮುಂದೆ ಬೈಕ್ ನಿಲ್ಲಿಸಿ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಚಾಣಾಕ್ಷತನದಿಂದ ಹ್ಯಾಂಡಲ್ ಲಾಕ್ ಮುರಿದು ಇಗ್ನಿಷಿಯನ್ ಡೈರೆಕ್ಟ್ ಮಾಡಿಕೊಂಡು ಬೈಕ್ ಗಳನ್ನು ಕಳವು ಮಾಡುತ್ತಿದ್ದ. ಕಳವು ಮಾಡಿದ ಬೈಕ್ ಗಳನ್ನು ಈ ಹಿಂದೆ ಕೆಲಸ ಮಾಡುತ್ತಿದ್ದ ಮಾಲೂರು ಹಾಗೂ ಸುತ್ತಮುತ್ತಲಿನ ಪರಿಚಯದವರಿಗೆ ಕಡಿಮೆ ಬೆಲೆಗೆ ಬೈಕುಗಳನ್ನು ಮಾರಾಟ ಮಾಡಿ ದಾಖಲೆಗಳನ್ನು ನಂತರ ನೀಡುವುದಾಗಿ ಹೇಳುತ್ತಿದ್ದ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ.

ಎಎಸ್ಪಿ ಪುರುಷೋತ್ತಮ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ಅಣ್ಣಾಸಾಹೇಬ್ ಪಾಟೀಲ್, ಪಿಐ ಅಶೋಕ್, ಪಿಎಸೈ ಸಂಪತ್ ಸೇರಿದಂತೆ ಅಪರಾಧ ವಿಭಾಗದ ಸಿಬ್ಬಂದಿಯನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.

ಬಾಕ್ಸ್ ...............

ಮುಂಬೈ, ಗೋವಾ ಕ್ಯಾಸಿನೋಗಳಲ್ಲಿ ಮೋಜು

ಬೈಕ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿ ಕಲೀಮ್ ಗೋವಾ ಹಾಗೂ ಮುಂಬೈನ ಲೈವ್ ಬ್ಯಾಂಡ್ ಹಾಗೂ ಕ್ಯಾಸಿನೋಗಳಿಗೆ ತೆರಳಿ ಆನ್ಲೈನ್ ಗೇಮಿಂಗ್ ಆಡಿ ಮೋಜು ಮಸ್ತಿ ಮಾಡುತ್ತಿದ್ದ. ಮೋಜು ಮಸ್ತಿ ಮಾಡಲಿಕ್ಕೆಂದು ಬೈಕ್ ಗಳನ್ನು ಕಳವು ಮಾಡುತ್ತಿದ್ದೆ ಎಂದು ಆರೋಪಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡೆ ತಿಳಿಸಿದ್ದಾರೆ.

ಫೋಟೋ : 17 ಹೆಚ್‌ಎಸ್‌ಕೆ 4

ಹೊಸಕೋಟೆ ಪೋಲಿಸರು ಕುಖ್ಯಾತ ಬೈಕ್ ಕಳ್ಳರನ್ನ ಬಂಧಿಸಿ 41 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದರು.

Share this article