ಬೆಂಗಳೂರು : ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆ ಎಂಬುದು ಕೇವಲ ಸಾಧ್ಯತೆಯಲ್ಲ, ಸಂಭವನೀಯತೆ ಎಂಬ ವಿಚಾರ ಮನದಟ್ಟಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ತೀವ್ರ ಚಟುವಟಿಕೆಗಳು ಆರಂಭವಾಗಿವೆ. ಹೊಸ ಮುಖಗಳಿಗೆ ಅವಕಾಶವಿದೆ ಎಂಬ ಸುಳಿವು ಅಸಂಖ್ಯ ಆಕಾಂಕ್ಷಿಗಳನ್ನು ಸೃಷ್ಟಿಸಿ, ಭರ್ಜರಿ ಲಾಬಿಗೆ ಆಸ್ಪದ ನೀಡಿದೆ.
ಇದೇ ವೇಳೆ ಸಂಪುಟದಿಂದ ಹೊರ ಬೀಳುವ ಭೀತಿಯಿಂದ ಕೆಲ ಪ್ರಭಾವಿ ಸಚಿವರೇ ಗುಂಪು ಸಭೆಗಳ ಮೂಲಕ ಕುರ್ಚಿ ಉಳಿಸಿಕೊಳ್ಳುವ ಹತಾಶ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಸಚಿವ ಸ್ಥಾನ ಕೈತಪ್ಪುವ ಆತಂಕದಲ್ಲಿರುವ ಕೆಲ ಸಚಿವರು ಪ್ರತ್ಯೇಕ ಸಭೆ ನಡೆಸಿ, ಸ್ಥಾನ ಉಳಿಸಿಕೊಳ್ಳುವ ತಂತ್ರಗಾರಿಕೆ ಹೂಡುವ ಪ್ರಯತ್ನ ನಡೆಸಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನಾಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ, ತಮ್ಮ ನಾಯಕರೊಂದಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಸೇರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ಶುರು ಮಾಡಿದ್ದಾರೆ. ತಮಗೆ ಸಚಿವ ಸ್ಥಾನ ಯಾವ ಕಾರಣಕ್ಕೆ ಸಿಗಬೇಕೆಂಬ ವಿವರಣೆ ನೀಡಲಾರಂಭಿಸಿದ್ದಾರೆ. ಈ ಮಧ್ಯೆ, ಸಂಪುಟ ಪುನಾರಚನೆ ವಿಚಾರವಾಗಿ ಕೆ.ಎಚ್.ಮುನಿಯಪ್ಪ, ಎನ್.ಎಸ್.ಬೋಸರಾಜು, ಚಲುವರಾಯಸ್ವಾಮಿ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಮತ್ತಿತರ ಹಾಲಿ ಸಚಿವರು ತಮ್ಮದೇ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿ ಶಾಸಕರೂ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಅವರೇನಾದರೂ ಸಚಿವ ಸ್ಥಾನ ಬಿಟ್ಟುಕೊಡಲು ಸೂಚಿಸಿದರೆ ಬಿಟ್ಟುಕೊಡಲೇ ಬೇಕಾಗುತ್ತದೆ. ಏಕೆಂದರೆ ನಮ್ಮಂತೆಯೇ ಪಕ್ಷದ ಇನ್ನೂ ಅನೇಕ ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಅವರು ನಿರ್ಧಾರ ಮಾಡುತ್ತಾರೆ. ಮುಖ್ಯಮಂತ್ರಿ ಅವರು ಕರೆದಿರುವ ಔಟಣ ಕೂಟಕ್ಕೂ ಸಂಪುಟ ಪುನಾರಚನೆಗೂ ಸಂಬಂಧ ಇಲ್ಲ. ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದರು. ಪ್ರತಿ ವರ್ಷದಂತೆ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದಾರೆ ಅಷ್ಟೆ. ಸಚಿವರ ಮೌಲ್ಯಮಾಪನ ಸಹಜ ಪ್ರಕ್ರಿಯೆ ಮಾಡಲಿ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು, ಸಂಪುಟ ಪುನಾರಚನೆ ಬಗ್ಗೆ ನನಗೇನೂ ಮಾಹಿತಿ ಇಲ್ಲ. ತಿಳಿದುಕೊಂಡು ಬಂದು ಮಾತನಾಡುತ್ತೇನೆ ಎಂದರು.
ಮಗಳಿಗಾಗಿ ಮಂತ್ರಿಗಿರಿ
ಬಿಟ್ಟುಕೊಡಲು ನಾ ಸಿದ್ಧ
ರಾಜಕೀಯವಾಗಿ ಪಕ್ಷ ಬಲಪಡಿಸಬೇಕಾದ್ರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾಲ್ಕೈದು ಬಾರಿ ಶಾಸಕರಾದವರಿಗೂ ಸಚಿವ ಸ್ಥಾನ ಇನ್ನೂ ಸಿಕ್ಕಿಲ್ಲ. ಅಂತಹವರಿಗೂ ಅವಕಾಶ ಕೊಡಬೇಕು. ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ನನ್ನ ಮಗಳಿಗೆ ಸಚಿವ ಸ್ಥಾನ ಸಿಕ್ಕರೆ ಬಹಳ ಸಂತೋಷ. ನಾನು ಸಚಿವ ಸ್ಥಾನವನ್ನು ಧಾರಾಳವಾಗಿ ಬಿಟ್ಟುಕೊಡುತ್ತೇನೆ. ನನಗೇನೂ ಅಭ್ಯಂತರ ಇಲ್ಲ.
- ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ
ಪಕ್ಷ ಸೂಚಿಸಿದರೆ ಸಚಿವ
ಸ್ಥಾನ ತೊರೆಯಲು ಸಿದ್ಧ
ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಅವರೇನಾದರೂ ಸಚಿವ ಸ್ಥಾನ ಬಿಟ್ಟುಕೊಡಲು ಸೂಚಿಸಿದರೆ ಯಾರೇ ಆದರೂ ಬಿಟ್ಟುಕೊಡಲೇ ಬೇಕಾಗುತ್ತದೆ. ಏಕೆಂದರೆ ನಮ್ಮಂತೆಯೇ ಪಕ್ಷದ ಇನ್ನೂ ಅನೇಕ ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ನಾನೂ ಪಕ್ಷ ಸೂಚಿಸಿದರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ.
- ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ