ಈಗ ವಾಲ್ಮೀಕಿ ನಾಯಕರಿಂದಲೂಸಭೆ: ಸಿದ್ದರಾಮಯ್ಯಗೆ ಬೆಂ‘ಬಲ’

KannadaprabhaNewsNetwork |  
Published : Dec 12, 2025, 02:00 AM IST
ಸತೀಶ್ ಜಾರಕಿಹೊಳಿ | Kannada Prabha

ಸಾರಾಂಶ

ಮಾಜಿ ಶಾಸಕ ಫಿರೋಜ್‌ ಸೇಠ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ನಾಯಕರು ಡಿನ್ನರ್‌ ಸಭೆ ನಡೆಸಿದ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯದ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಶಾಸಕ ಫಿರೋಜ್‌ ಸೇಠ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ನಾಯಕರು ಡಿನ್ನರ್‌ ಸಭೆ ನಡೆಸಿದ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯದ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಬುಧವಾರ ರಾತ್ರಿ ಅಹಿಂದ ನಾಯಕರ ಡಿನ್ನರ್‌ ಸಭೆ ಬಳಿಕ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಕೆ.ಎನ್‌.ರಾಜಣ್ಣ ಸೇರಿ ಪ್ರಮುಖರು ಸಭೆ ನಡೆಸಿದರು.

ಸಭೆ ಬಳಿಕ ಪ್ರಸನ್ನಾನಂದ ಸ್ವಾಮೀಜಿ ಅವರು, ‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿದರೆ ನಮ್ಮ ಸಮಾಜದ ಶಾಸಕರ ವಿರೋಧ ಇಲ್ಲ. ಒಂದು ವೇಳೆ ಬದಲಾವಣೆ ಮಾಡುವುದಾದರೆ ಅಹಿಂದ ನಾಯಕರನ್ನೇ ಆ ಸ್ಥಾನಕ್ಕೆ ತರಬೇಕು, ಬೇರೆ ಯಾರೂ ಬೇಡ’ ಎಂದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಅವರು, ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸ್ವಾಮೀಜಿ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬುಧವಾರದ ಸಭೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ‘ನಮ್ಮ ಸಮಾಜದ ನಾಲ್ಕೈದು ನಾಯಕರಿದ್ದಾರೆ.‌ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌, ಎಚ್.ಸಿ.ಮಹಾದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಇವರಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಲಿ. ಸಿದ್ದರಾಮಯ್ಯ ಮುಂದುವರೆಯುವುದಾದರೆ ಮುಂದುವರೆಯಲಿ. ಬದಲಾವಣೆಯಾದರೆ ಅಹಿಂದ ನಾಯಕರೇ ಆ ಸ್ಥಾನಕ್ಕೆ ಬರಬೇಕು’ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ನೇತೃತ್ವದ ಸಭೆಯಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಶಾಸಕರಾದ ಕೆ.ಎನ್‌.ರಾಜಣ್ಣ, ಕಂಪ್ಲಿ ಗಣೇಶ್‌, ಚಳ್ಳಕೆರೆ ರಘು, ಬಸನಗೌಡ ತುರವಿಹಾಳ್, ಬಸನಗೌಡ ದದ್ದಲ್‌ ಸಭೆಯಲ್ಲಿ ಭಾಗಿಯಾಗಿದ್ದರು. ತಡರಾತ್ರಿವರೆಗೆ ಹಲವು ತಾಸು ಸಭೆ ನಡೆಯಿತು. ವಾಲ್ಮೀಕಿ ಜಾತ್ರೆ, ಸಮುದಾಯದ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಕ್ತಿ ಪ್ರದರ್ಶನದ ಸಭೆಯಲ್ಲ-ರಾಜಣ್ಣ:

‘ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಸಭೆ ನಡೆಸಿದ್ದೇವೆ. ಸಮುದಾಯದ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ಇದೇನು ಶಕ್ತಿ ಪ್ರದರ್ಶನವಲ್ಲ’ ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಔತಣಕೂಟಕ್ಕೆ ನಾನು ಹೋಗಿರಲಿಲ್ಲ. ಸಮುದಾಯ ಕುರಿತ ಸಭೆಯಾದ ಕಾರಣ ಭಾಗಿಯಾಗಿದ್ದೆ. ಸಮುದಾಯದ ಸಮಸ್ಯೆಗಳ ಜತೆಗೆ ಇತರ ವಿಚಾರಗಳನ್ನೂ ಚರ್ಚಿಸಿದ್ದೇವೆ. ಆ ವಿವರಗಳನ್ನು ನೀಡಲು ಸಾಧ್ಯವಿಲ್ಲ’ ಎಂದರು.

ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಜಣ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ