ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಜತೆ ಈಗ ‘ನಂದಿನಿ’ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ

KannadaprabhaNewsNetwork |  
Published : Dec 26, 2024, 01:01 AM ISTUpdated : Dec 26, 2024, 07:40 AM IST
Nandini | Kannada Prabha

ಸಾರಾಂಶ

ಬೆಂಗಳೂರು ನಗರದಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಜತೆ ಇನ್ನು ಮುಂದೆ ‘ರೆಡಿ ಟು ಕುಕ್‌’ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟು ಕೂಡ ದೊರೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋಟಿನ್‌ ಆಧಾರಿತ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಬುಧವಾರ ಬಿಡುಗಡೆ ಮಾಡಿದರು.

 ಬೆಂಗಳೂರು : ಬೆಂಗಳೂರು ನಗರದಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಜತೆ ಇನ್ನು ಮುಂದೆ ‘ರೆಡಿ ಟು ಕುಕ್‌’ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟು ಕೂಡ ದೊರೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋಟಿನ್‌ ಆಧಾರಿತ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಬುಧವಾರ ಬಿಡುಗಡೆ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಂದಿನಿ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜನರ ಬಹುದಿನಗಳ ಅಪೇಕ್ಷೆಯಂತೆ ನಂದಿನಿ ಉತ್ಪನ್ನಗಳಿಗೆ ಹೊಸ ಸೇರ್ಪಡೆಯಾಗಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಇದರಿಂದ ಬೆಳಗಿನ ಉಪಾಹಾರವು ಗರಿಗರಿ ದೋಸೆ, ಸವಿಸವಿ ಇಡ್ಲಿಯೊಂದಿಗೆ ರುಚಿ ಮತ್ತು ಆರೋಗ್ಯವನ್ನು ವೃದ್ಧಿಗೊಳಿಸಲಿದೆ ಎಂದು ಹೇಳಿದರು.

ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್‌ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಿಂದ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್‌ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

₹40 ಮತ್ತು ₹80 ಪ್ಯಾಕೆಟ್‌ಗಳಲ್ಲಿ ಲಭ್ಯ:

ವೇ ಪ್ರೊಟೀನ್‌ ಆಧಾರಿತ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಇಡ್ಲಿ ಮತ್ತು ದೋಸೆ ಹಿಟ್ಟಿನಲ್ಲಿ ಶೇಕಡ 5 ರಷ್ಟು ಪ್ರಮಾಣದ ಪ್ರೊಟೀನ್‌ ಇರಲಿದೆ. ಹಿಟ್ಟಿನ (ಬ್ಯಾಟರ್‌) 450 ಗ್ರಾಂ. ಪಾಕೆಟ್‌ಗೆ ₹40 ಹಾಗೂ 900 ಗ್ರಾಂ ಪಾಕೆಟ್‌ಗೆ ₹80 ಗರಿಷ್ಠ ಮಾರಾಟ ಬೆಲೆ ನಿಗದಿ ಮಾಡಲಾಗಿದೆ.

ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಮಾರಾಟ ಆರಂಭಿಸಿದ್ದು, ಪ್ರತಿಕ್ರಿಯೆ ಆಧರಿಸಿ ಇತರೆ ನಗರಗಳಿಗೆ ಪೂರೈಸಲು ಕೆಎಂಎಫ್‌ ನಿರ್ಧಾರ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಸಚಿವರಾದ ಕೃಷ್ಣಬೈರೇಗೌಡ, ಕೆ.ವೆಂಕಟೇಶ್, ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ