ನರೇಗಾ ಕೂಲಿ ಕಾರ್ಮಿಕರಿಗೆ ವರದಾನ: ಚಲುವರಾಯಸ್ವಾಮಿ

KannadaprabhaNewsNetwork | Published : Mar 25, 2025 12:49 AM

ಸಾರಾಂಶ

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆ ಕೃಷಿ ಕವಚ ಕಾರ್ಯಕ್ರಮದಡಿ ಕೃಷಿ ಇಲಾಖೆ ಯೋಜನೆಗಳ ಒಗ್ಗೂಡಿತ ಬದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ದಿ. ಡಾ.ಮನಮೋಹನ್ ಸಿಂಗ್ ಪ್ರಥಮ ಬಾರಿಗೆ ನರೇಗಾ ಯೋಜನೆಯನ್ನು ಜಾರಿಗೊಳಿಸಿದರು. ಕೂಲಿ ಕಾರ್ಮಿಕರ ಬದುಕಿಗೆ ಈ ಯೋಜನೆ ಆಸರೆಯಾಯಿತು. ದೇಶದ ಯಾವುದೇ ಪ್ರಜೆಯೂ ಹಸಿವಿನಿಂದ ಬಳಲಬಾರದೆಂದು ಆಹಾರ ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಿದ್ದರು ಎಂದು ಹೇಳಿದರು.

ಬೇಸಿಗೆ ಕಾಲದಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಉದ್ಭವಿಸುತ್ತದೆ, ಇದರಿಂದ ಬೆಳೆಹಾನಿ ಸಂಭವ ಹೆಚ್ಚು, ಮೊದಲ ಹಂತದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನೀರಿನ ಕೊರತೆ ಇರುವ ರಾಜ್ಯದ ೧೦೪ ತಾಲೂಕುಗಳಲ್ಲಿ ಕೃಷಿ ಹೊಂಡ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈಗ ೨೨೪ ತಾಲೂಕುಗಳಲ್ಲೂ ಯೋಜನೆ ಜಾರಿಯಲ್ಲಿದೆ. ನೀರಿಗೆ ಕೊರತೆಯಾದ ಸಂದರ್ಭದಲ್ಲಿ ೧೫- ೩೦ ದಿನಗಳ ಅವಧಿಗೆ ಕೃಷಿಗೆ ನೀರನ್ನು ನೀಡಬಹುದು ಎಂದರು.

ಕೃಷಿ ಇಲಾಖೆಯಲ್ಲಿ ರೈತರಿಗೆ ಹಲವಾರು ಯೋಜನೆಗಳಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಮ- ನರೇಗಾ ಯೋಜನೆ ಕುರಿತು ಕಾರ್ಯಾಗಾರ ನಡೆಸಿ ಹೆಚ್ಚಿನ ಸಾಧನೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳು ಒಕ್ಕೂಟದ ಅಧ್ಯಕ್ಷ ಕಾರಸವಾಡಿ ಮಹದೇವ, ಮಂಡ್ಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ನರೇಗಾ ಆಯುಕ್ತಾಲಯ ಜಂಟಿ ನಿರ್ದೇಶಕಿ ಲಲಿತಾ ರೆಡ್ಡಿ ಇತರರಿದ್ದರು.

Share this article