31ರೊಳಗಾಗಿ ಇ ಕೆವೈಸಿ ಮಾಡಿಸದಿದ್ದರೆ ನರೇಗಾ ಜಾಬ್‌ ಕಾರ್ಡ್ ರದ್ದು: ಬಸವರಾಜ ಬಡಿಗೇರ

KannadaprabhaNewsNetwork |  
Published : Oct 28, 2025, 12:16 AM IST
ಗಜೇಂದ್ರಗಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇ- ಕೆವೈಸಿ ಜಾಗೃತಿ ಮೂಡಿಸಲಾಯಿತು. | Kannada Prabha

ಸಾರಾಂಶ

ಹಾಲಕೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇ- ಕೆವೈಸಿ ಕಾರ್ಯ ಪರಿಶೀಲಿಸಿದ ಎಡಿ ಬಡಿಗೇರ ಅವರು, ಖುದ್ದು ಗ್ರಾಮದಲ್ಲಿ ಸಂಚರಿಸಿ ಕೂಲಿಕಾರರ ಮನೆಗಳಿಗೆ ಭೇಟಿ ನೀಡಿ ಇ- ಕೆವೈಸಿ ಕಾರ್ಯ ಮಾಡಿದರು.

ಗಜೇಂದ್ರಗಡ: ಕೇಂದ್ರ ಸರ್ಕಾರ ನರೇಗಾ ಯೋಜನೆಯ ಕೂಲಿಕಾರರಿಗೆ ಇ- ಕೆವೈಸಿ ಕಡ್ಡಾಯಗೊಳಿಸಿದೆ. ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಇ- ಕೆವೈಸಿ ಕಾರ್ಯ ಪ್ರಗತಿಯಲ್ಲಿದ್ದು, 4 ದಿನಗಳಲ್ಲಿ ತಾಲೂಕಿನ ಎಲ್ಲ ನರೇಗಾ ಕೂಲಿಕಾರರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉದ್ಯೋಗ ಚೀಟಿ ರದ್ದುಗೊಳಿಸಲಾಗುವುದೆಂದು ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ತಿಳಿಸಿದರು.ತಾಲೂಕಿನಲ್ಲಿ ಅತಿ ಕಡಿಮೆ ಇ- ಕೆವೈಸಿ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿಗಳಾದ ಹಾಲಕೆರೆ ಮತ್ತು ಮಾರನಬಸರಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಕೂಲಿಕಾರರ ಮನೆ- ಮನೆಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಹಾಲಕೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಇ- ಕೆವೈಸಿ ಕಾರ್ಯ ಪರಿಶೀಲಿಸಿದ ಎಡಿ ಬಡಿಗೇರ ಅವರು, ಖುದ್ದು ಗ್ರಾಮದಲ್ಲಿ ಸಂಚರಿಸಿ ಕೂಲಿಕಾರರ ಮನೆಗಳಿಗೆ ಭೇಟಿ ನೀಡಿ ಇ- ಕೆವೈಸಿ ಕಾರ್ಯ ಮಾಡಿದರು.

ಈ ವೇಳೆ ಗ್ರಾಮಸ್ಥರ ಜತೆ ಸಮಾಲೋಚನೆ ನಡೆಸಿದ ಅವರು, ಅ. 31ರೊಳಗಾಗಿ ಇ- ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಆಗುವುದಿಲ್ಲ ಎಂದರು.ಮಾರನಬಸರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಿಬ್ಬಂದಿ ಜತೆ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ಸಂದರ್ಭದಲ್ಲಿ ನೆಟ್ವರ್ಕ್‌ ಸಮಸ್ಯೆ ಇರುವುದಿಲ್ಲ. ಆ ವೇಳೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಒಂದೆಡೆ ಕೂಲಿಕಾರರನ್ನು ಸೇರಿಸಿಕೊಂಡು ಇ- ಕೆವೈಸಿ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.

ಗಜೇಂದ್ರಗಡ ತಾಲೂಕಿನಲ್ಲಿ ಒಟ್ಟು 37307 ನರೇಗಾ ಕೂಲಿಕಾರರು ಇದ್ದಾರೆ. ಈವರೆಗೂ 18198 ನರೇಗಾ ಕೂಲಿಕಾರರ ಇ- ಕೆವೈಸಿ ಕಾರ್ಯ ಪೂರ್ಣಗೊಂಡಿದೆ. ಬಾಕಿ 19109 ನರೇಗಾ ಕೂಲಿಕಾರರ ಇ- ಕೆವೈಸಿ ಕಾರ್ಯ ಉಳಿದಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಸಿಬ್ಬಂದಿಗೆ ವರ್ಚುವಲ್ ಸಭೆ ಮೂಲಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ತಾಕೀತು ಮಾಡಿದ್ದಾರೆ.

ಈ ವೇಳೆ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು ಇದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ