ಮಾಗಡಿ: ಸೀಗೆಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದೆಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳಗವಾಡಿ ವೆಂಕಟೇಶ್ ಆರೋಪಿಸಿದರು.
ಅದೇ ರೀತಿ ಸೀಗೆಕುಪ್ಪೆ ಗ್ರಾಪಂ ವ್ಯಾಪ್ತಿಯ ಬೆಳಗವಾಡಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯವನ್ನು ಅಭಿವೃದ್ಧಿಪಡಿಸಲು ಪಂಚಾಯತ್ ರಾಜ್ ಇಲಾಖೆಯಿಂದ ₹ 5 ಲಕ್ಷ ರು. ಅನುದಾನ ಬಂದಿದ್ದು, ಅಂದಾಜು ಪಟ್ಟಿಯಲ್ಲಿರುವಂತೆ ನೀರಿನ ಸಂಪು ನಿರ್ಮಾಣ ಮಾಡಿಲ್ಲ. ನೆಲಕ್ಕೆ ಅಳವಡಿಸಿರುವ ಸ್ಲಾಬ್‌ಗಳು ಕಳಪೆಯಿಂದ ಕೂಡಿದೆ. ಬೆಳಗವಾಡಿ ಪಶು ಚಿಕಿತ್ಸಾಲಯದಲ್ಲಿ ಪಶುಗಳಿಗೆ ಚುಚ್ಚುಮದ್ದು ನೀಡುವ ಸಲುವಾಗಿ ನಿರ್ಮಿಸುತ್ತಿರುವ ಟ್ರೀವಿಸ್ ಶೆಲ್ಟರ್ ನಿರ್ಮಾಣ ಮಾಡುವ ಕಾಮಗಾರಿಯಲ್ಲಿಯೂ ಅಂದಾಜು ಪಟ್ಟಿಯಲ್ಲಿ ನಮೂದಿಸಿರುವಂತೆ ಗುಣಮಟ್ಟದ ಕಬ್ಬಿಣದ ಸಾಮಗ್ರಿಗಳನ್ನು ಬಳಸುವ ಬದಲು ಕಳಪೆ ಗುಣಮಟ್ಟದ ಕಬ್ಬಿಣದ ಸಾಮಗ್ರಿಗಳನ್ನು ಬಳಕೆ ಮಾಡಲಾಗಿದೆ.
ಬೆಳಗವಾಡಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಗ್ರಾಮ ವಿಕಾಸ ಯೋಜನೆಯಡಿ ಅಟಿಕೆ ಪರಿಕರಗಳನ್ನು ಅಳವಡಿಸಲು 2024ನೇ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಆಟಿಕೆಗಳನ್ನು ಅಳವಡಿಸಿಲ್ಲ. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ತಾಪಂ ಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿ.ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.