ಬೆಂಗಳೂರು : ಊರಲ್ಲೇ ಇದ್ದರೂ ಸುಡುವ ಬಿಸಿಲು ಸೇರಿದಂತೆ ನಾನಾ ಕುಂಟು ನೆಪ ಹೇಳಿಕೊಂಡು ಮತದಾನ ಮಾಡಲು ಉದಾಸೀನ ತೋರುವ ಮಂದಿ ನಡುವೆ ವಿದೇಶದಲ್ಲಿದ್ದರೂ ಸಾವಿರಾರು ರುಪಾಯಿ ಖರ್ಚು ಮಾಡಿಕೊಂಡು ಹುಟ್ಟೂರಿಗೆ ಬಂದು ಹಲವರು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ. ಉದ್ಯೋಗ, ಶಿಕ್ಷಣಕ್ಕೆಂದು ವಿದೇಶಕ್ಕೆ ಹೋಗಿದ್ದ ಮಂದಿ ಹುಟ್ಟೂರಲ್ಲಿ ತಮ್ಮ ಮತಚಲಾಯಿಸಿ ಸಂಭ್ರಮಿಸಿದ್ದಾರೆ.
ಲಂಡನ್‌ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಮಂಡ್ಯದ ಕಾಳೇನಹಳ್ಳಿಯ ಸೋನಿಕಾ, ಏಳು ವರ್ಷಗಳಿಂದ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಂಡ್ಯದ ಕೆ.ಎಸ್.ಪ್ರಕೃತಿ ಮತದಾನಕ್ಕಾಗಿಯೇ ಊರಿಗೆ ಬಂದಿದ್ದು, ಹುಟ್ಟೂರಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಇನ್ನು ದುಬೈನಲ್ಲಿ ಕೆಲಸದಲ್ಲಿರುವ ಮಂಗಳೂರಿನ ಜೀವಿತಾ ಹುಟ್ಟೂರು ಉಳಾಯಿ ಬೆಟ್ಟಿನ ಗ್ರಾಪಂ ವ್ಯಾಪ್ತಿಯಲ್ಲಿ ಮತದಾನ ಮಾಡಿದರೆ, ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನುಪಮಾ ಮತದಾನಕ್ಕೆಂದೇ ಕೋಲಾರಕ್ಕೆ ಬಂದು ಮಾಸ್ತಿ ಬಡಾವಣೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿತ್ರದುರ್ಗದ ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಅವರ ಪುತ್ರ ಲಿಖಿತಾ ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದು, ಮತದಾನಕ್ಕೆಂದೇ ಊರಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಅವರು ಮತ ಚಲಾಯಿಸಿ ಹೋಗಿದ್ದರು. ಇದೇ ರೀತಿ ರಾಜ್ಯದ ಹಲವೆಡೆ ಅನೇಕರು ಮತದಾನಕ್ಕೆಂದೇ ರಜೆಯನ್ನು ಹೊಂದಾಣಿಕೆ ಮಾಡಿಕೊಂಡು ಹುಟ್ಟೂರಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎನ್‌ಆರ್‌ಐ ಉದ್ಯಮಿ: ಅನಿವಾಸಿ ಭಾರತೀಯ, ಉದ್ಯಮಿ ಪ್ರವೀಣ್ ಶೆಟ್ಟಿ ಅವರು ಕೂಡ ಮತದಾನಕ್ಕೆಂದೇ ಕುಟುಂಬ ಸಮೇತ ದುಬೈನಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ಉಡುಪಿಯ ವಕ್ವಾಡಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ನಾನು ಪ್ರತಿ ಚುನಾವಣೆಯ ವೇಳೆಯೂ ಸ್ವದೇಶಕ್ಕೆ ಆಗಮಿಸಿ ತಪ್ಪದೆ ಮತಚಲಾಯಿಸುತ್ತೇನೆ, ದೇಶದ ಹಿತಕ್ಕಾಗಿ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ಇದೇ ವೇಳೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.