ಪುತ್ತೂರು: ದೇಶದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳನ್ನು ಎಳವೆಯಲ್ಲೇ ಸಂಸ್ಕಾರಭರಿತ ಶಾಸ್ತ್ರೀಯ ಕಲೆಗಳ ಕಲಿಕೆಗೆ ಸೇರಿಸುವುದರಿಂದ ಭಾರತೀಯ ಗುರುಪರಂಪರೆಯನ್ನು ಉಳಿಸಲು ಸಾಧ್ಯವಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.ಅವರು ಶನಿವಾರ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇಲ್ಲಿನ ಜೈನ ಭವನದಲ್ಲಿ ಏರ್ಪಡಿಸಿದ ‘ವರ್ಷ ಸಂಭ್ರಮ-೨೧’ ವಾರ್ಷಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಡಾ.ಹರಿಕೃಷ್ಣ ಪಾಣಾಜೆ, ಪ್ರತಿಯೊಂದು ಕಲೆಯನ್ನು ಆಸ್ವಾದಿಸಬೇಕು. ಶಾಸ್ತ್ರೀಯ ಕಲೆಯಲ್ಲಿ ದೈವತ್ವವನ್ನು ಕಾಣಬಹುದಾಗಿದೆ ಎಂದರು.ವಿದ್ವಾನ್ ಬಾಲಕೃಷ್ಣ ಹೊಸಮನೆ ವರ್ಷಸಂಭ್ರಮ-೨೧ನ್ನು ಉದ್ಘಾಟಿಸಿದರು. ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸ್ತ್ರೀಯ ನೃತ್ಯಗಳ ಅಭ್ಯಾಸ, ಪಠ್ಯ ಕಲಿಕೆಗೆ ಎಂದಿಗೂ ತೊಡಕಾಗದು ಎಂಬುದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೇ ಸಾಕ್ಷಿ. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳು ಪಠ್ಯ ಕಲಿಕೆ ಜೊತೆಗೆ ಭರತನಾಟ್ಯವನ್ನು ಕಲಿತು, ನೃತ್ಯ ಪ್ರದರ್ಶನಗಳಿಗೂ ನಿರಂತರ ಹಾಜರಾಗುತ್ತಾ ಕಲಿಕೆ ಮತ್ತು ನೃತ್ಯ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿಂತಾಶವನ್ನು ದಾಖಲಿಸುತ್ತಿದ್ದಾರೆ ಎಂದರು.ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್., ಉಪಾಧ್ಯಕ್ಷ ಕೃಷ್ಣಕುಮಾರ್, ಕಾರ್ಯದರ್ಶಿ ಆತ್ಮಭೂಷಣ್, ಜೊತೆ ಕಾರ್ಯದರ್ಶಿ ರಾಧೇಶ್ ಉಪಸ್ಥಿತರಿದ್ದರು. ಸಂಸ್ಥೆಯ ಪೋಷಕಿ ಅನ್ನಪೂರ್ಣ ಸ್ವಾಗತಿಸಿದರು. ರಜನಿ ವಸಂತ್ ನಿರೂಪಿಸಿದರು. ಡಾ.ವಿಜಯ ಸರಸ್ವತಿ ನಿರೂಪಿಸಿದರು.
ಬಳಿಕ ಅಕಾಡೆಮಿಯ ಪುತ್ತೂರು ಹಾಗೂ ಉಪ್ಪಿನಂಗಡಿ ಶಾಖಾ ವಿದ್ಯಾರ್ಥಿಗಳಿಂದ ನೃತ್ಯೋಪಾಸನಾ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ವಿದುಷಿ ಡಾ.ನಿಶಿತಾ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ವಿದ್ವಾನ್ ಗೀತೇಶ್ ನೀಲೇಶ್ವರ ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಜ್‌ಗೋಪಾಲ್ ಕಾಞಂಗಾಡ್ ಸಹಕರಿಸಿದರು.ಈ ಸಂದರ್ಭ ಮೃದಂಗ ಮತ್ತು ಮೋರ್ಸಿಂಗ್ ಕಲಾವಿದ ವಿದ್ವಾನ್ ಬಾಲಕೃಷ್ಣ ಹೊಸಮನೆ ಅವರಿಗೆ ‘ನೃತ್ಯೋಪಾಸನಾ ಗೌರವ’ ಪ್ರದಾನ ಮಾಡಲಾಯಿತು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ನೃತ್ಯ ಕಲಿಸುವ ‘ನೃತ್ಯ ಪೋಷಣ’ ಯೋಜನೆಗೆ ಇಬ್ಬರು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಯಿತು. ಅಕಾಡೆಮಿಯ ನಿರ್ವಾಹಕ ಟ್ರಸ್ಟಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಗೆ ವಿದ್ವತ್ ಹಂತದ ವಿದ್ಯಾರ್ಥಿಗಳಿಂದ ಗುರು ವಂದನೆ ನಡೆಯಿತು. ಮೈಸೂರಿನ ಕರ್ನಾಟಕ ಗಂಗೂಬಾಯಿ ಹಾನಗಲ್ ಸಂಗೀತ, ನೃತ್ಯ, ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.