ಪ್ರಿಯದರ್ಶಿನಿ ಪಪೂ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿದ ಶಾಸಕ
ಎನ್‌ಎಸ್‌ಎಸ್ ಶಿಬಿರ, ಚಟುವಟಿಕೆಗಳು ಯುವಜನತೆಯಲ್ಲಿ ಉತ್ತಮ ಕೌಶಲ್ಯ ಬೆಳವಣಿಗೆಗೆ ಹೆಚ್ಚು ಪೂರಕವಾಗಿವೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಇಲ್ಲಿಗೆ ಸಮೀಪದ ಹೊಸ ಅಯ್ಯನಹಳ್ಳಿ ಗ್ರಾಮದಲ್ಲಿ ಪಟ್ಟಣದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು.ಎನ್‌ಎಸ್‌ಎಸ್ ಶಿಬಿರವು ಶಿಸ್ತು ಮತ್ತು ಸ್ವಚ್ಛತೆಯ ಜೀವನ ಕಲಿಸುತ್ತದೆ. ಉತ್ತಮ ಆಚಾರ-ವಿಚಾರ ಕಲಿಸುತ್ತದೆ. ಪ್ರತಿಯೊಬ್ಬರು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕೂಡಿರಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಪರಿಸರ ಚೆನ್ನಾಗಿದ್ದರೆ ಉತ್ತಮ ಮಳೆ, ಬೆಳೆ ಬರಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್, ಮಟ್ಕಾ, ಜೂಜಾಟಗಳಿಗೆ ಕಡಿವಾಣ ಹಾಕಲು ವಿಭಾಗಿಯ ಪೊಲೀಸ್ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿರುವೆ. ಈಗಾಗಲೇ ಹೊರ ದೇಶಗಳಿಗೆ ಯುವಕರನ್ನು ಕರೆದೊಯ್ದು ಜೂಜಾಟಗಳನ್ನು ಆಡಿಸಿ, ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಹಾಳಾಗುತ್ತಿವೆ. ಇಂತಹ ಚಟುವಟಿಕೆಗಳನ್ನು ಉತ್ತೇಜಿಸುವವರ ವಿರುದ್ದ ಕ್ರಮವಾಗಬೇಕು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಎಂ. ಅಶೋಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪವಿತ್ರ ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಪಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಬಿ. ಲತಾ ಸ್ವಾಗತಿಸಿದರು. ಸೋಮಪ್ಪ ನಿರೂಪಿಸಿದರು.