ಕನ್ನಡಪ್ರಭ ವಾರ್ತೆ ಮೂಡಲಗಿ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ನುಡಿದರು.ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ದತ್ತುಗ್ರಾಮ ಬಳೋಬಾಳದಲ್ಲಿ ಹಮ್ಮಿಕೊಂಡಿರುವ ೨೦೨೫-೨೬ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಶಾಶ್ವತವಾದ ಕಾರ್ಯಗಳನ್ನು ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಅವರು ವಿದ್ಯಾರ್ಥಿಗಳಿಗೆ ಶಿಬಿರದ ಶಿಸ್ತು ಮತ್ತು ಉದ್ದೇಶಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಏಳು ದಿನಗಳ ಕಾಲ ನಡೆಯಲಿರುವ ವಿವಿಧ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಸದಸ್ಯ ಸುನೀಲ ಈರೇಶನವರ ಮಾತನಾಡಿ, ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಶ್ಲಾಘನೀಯ ಎಂದು ಹಾರೈಸಿದರು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೆ.ಜೆ. ಸರ್ವಿ ಅವರು ಶಿಬಿರದ ಯಶಸ್ಸಿಗೆ ಶುಭ ಕೋರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಪ್ರಧಾನಿ ಕಳಸನ್ನವರ, ಸರ್ಕಾರಿ ಪ್ರೌಢ ಶಾಲೆಯ ಎ.ಡಿ.ಎಂ.ಸಿ. ಅಧ್ಯಕ್ಷ ಶ್ರೀಶೈಲ್ ಬೆಳವಿ, ಗ್ರಾಮದ ಹಿರಿಯರಾದ ಲಗಮಣ್ಣ ಕಳಸನ್ನವರ, ಸಹ ಶಿಬಿರಾಧಿಕಾರಿಗಳಾದ ಬಿ.ಸಿ. ಮಾಳಿ, ಬೋಧಕ/ಬೋಧಕೇತರ ಸಿಬ್ಬಂದಿ, ಸ್ವಯಂಸೇವಕರು ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.ರಾಧಿಕಾ ಕರೆಪ್ಪಗೋಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪ್ರೀಯಾ ಹುಣಶ್ಯಾಳ ಹಾಗೂ ಸಂಗಡಿಗರು ಎನ್.ಎಸ್.ಎಸ್. ಗೀತೆ ಹಾಡಿದರು. ಡಾ. ಕೆ.ಎಸ್. ಪರವ್ವಗೋಳ ನಿರೂಪಿದರು, ಸಹಶಿಬಿರಾಧಿಕಾರಿ ಎಂ.ಬಿ. ಜಾಲಗಾರ ಸ್ವಾಗತಿಸಿದರು. ವಿಲಾಸ ಕೆಳಗಡೆ ವಂದಿಸಿದರು.