ಸೇವಾ ಮನೋಭಾವಕ್ಕೆ ಎನ್‌ಎಸ್‌ಎಸ್‌ ಸಹಕಾರಿ: ಡಾ.ಗುಣಶ್ರೀ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ರಾಷ್ಟ್ರ ನಿರ್ಮಾಣದಲ್ಲಿ ಎನ್‌ಎಸ್‌ಎಸ್‌ ಸ್ವಯಂ ಸೇವಕರ ಕೊಡುಗೆ ಮಹತ್ತರವಾದುದು ಎಂದು ಕೊಡಗು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಗುಣಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರ ನಿರ್ಮಾಣದಲ್ಲಿ ಎನ್ಎಸ್ಎಸ್ ಸ್ವಯಂಸೇವಕರ ಕೊಡುಗೆ ಮಹತ್ತರವಾದದ್ದು. ವಿದ್ಯಾರ್ಥಿ ದೆಸೆಯಿಂದಲೇ ಎನ್‌ಎಸ್‌ಎಸ್ ಸ್ವಯಂ ಸೇವಕರಾಗಿ ಸೇವಾ ಮನೋಭಾವವನ್ನು ಬೆಳಸಿಕೊಳ್ಳಬೇಕು. ಆ ಮೂಲಕ ಸಾರ್ಥಕ ವಿದ್ಯಾರ್ಥಿ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಕೊಡಗು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಗುಣಶ್ರೀ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಫಟಕಗಳ ವಾರ್ಷಿಕ ಶಿಬಿರವನ್ನು ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಾಗೃತಿ ಪ್ರಜ್ಞೆಯಿಂದ ಸಮಾಜಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ರೂಪಿಸಬೇಕು. ವಿದ್ಯಾರ್ಥಿ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಓ.ಎಂ. ಮಾತನಾಡಿ, ಆಧುನಿಕ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು ಕುಂಠಿತಗೊಳುತ್ತಿದೆ. ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸುವ ಕಡೆಗೆ ನಮ್ಮ ಸಹಭಾಗಿತ್ವ ಇರಬೇಕು ಎಂದರು.

ಮತ್ತೊರ್ವ ಅತಿಥಿ ಗಾಳಿಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮಗಳಲ್ಲಿ ಎನ್‌ಎಸ್‌ಎಸ್‌ ಸ್ವಯಸೇವಕರು ತಮ್ಮ ಶ್ರಮ ಸಂಸ್ಕೃತಿಯ ಆಯಾಮವನ್ನು ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಸಮಾಜಕ್ಕೆ ನೀವು ನೀಡುವ ಕೊಡುಗೆ ನಿಮ್ಮನ್ನ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿಸುತ್ತದೆ. ಸ್ವಯಂ ಸೇವಕರಿಗೆ ಶಿಸ್ತು ಸಂಯಮ ತುಂಬಾ ಅಗತ್ಯ ಎಂದರು.

ಸುಧಾಮಣಿ ಎಂ.ಆರ್. ಉಪಸ್ಥಿತರಿದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಂಯೋಜನಾಧಿಕಾರಿ ಡಾ. ಎ.ಎನ್. ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಲೋಕ್ ಬಿಜೈ ಸ್ವಾಗತಿಸಿ, ವಂದಿಸಿದರು. ಡಾ. ಮುಸ್ತಾಫ ಕೆ.ಎಚ್. ನಿರೂಪಿಸಿದರು. ಎನ್‌ಎಸ್‌ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Share this article