ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ
ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಅಶೋಕ ಸರ್ಕಲ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರವು ನೀಟ್ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು.ನೀಟ್ ಫಲಿತಾಂಶ ವಿವಾದವಾಗಲು ಅನೇಕ ಅಂಶಗಳು ಕಾರಣವಾಗಿದ್ದು, ಒಟ್ಟು 67 ವಿದ್ಯಾರ್ಥಿಗಳು ಮೊದಲ ರ್‍ಯಾಂಕ್ ಬಂದಿರುವುದು ಹಾಗೂ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್ ಮಾಡಿರುವುದು ನೀಟ್ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ರ್‍ಯಾಂಕ್ ಬಂದಿರುವವರಲ್ಲಿ ಆರು ವಿದ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವರಾಗಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ನೀಟ್ ಪರೀಕ್ಷೆಯ ಫಲಿತಾಂಶದ ನಂತರ ದೇಶದ ಕೆಲವೆಡೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಯುವ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎನ್ಎಸ್‌ಯುಐ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಕಾರಟಗಿ, ಮಾಜಿ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ತಾಲೂಕು ಅಧ್ಯಕ್ಷ ಹನುಮೇಶ ಬೆಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಭೋವಿ, ಕಾರ್ಯಕರ್ತರಾದ ಮರಿಯಪ್ಪ, ಶಿವು, ಶಂಕರ, ದೇವರಾಜ ಅನೇಕರಿದ್ದರು.