ಭಟ್ಕಳ: ರಾಜ್ಯದಲ್ಲಿ ವಿದ್ಯಾರ್ಥಿಗಳ ಹಿತಕ್ಕಾಗಿ ನ್ಯಾಯ ಯಾತ್ರೆಯನ್ನು ಪ್ರಾರಂಭಿಸಿದ್ದು, ಈ ನ್ಯಾಯ ಯಾತ್ರೆಯು ಆರಂಭವಾಗಿದೆ ಎಂದು ಎನ್ಎಸ್ಐಯು ರಾಜ್ಯ ಕಾರ್ಯದರ್ಶಿ ಮನೀಷ್ ಹೇಳಿದರು.ಅವರು ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರತಿಯೊಂದು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು. ಅದನ್ನು ರಾಜ್ಯ ಮಟ್ಟದಲ್ಲಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಯೋಜನೆ ಕೈಗೊಂಡಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಯಾವುದೇ ಹಿನ್ನೆಲೆಯನ್ನು ಲೆಕ್ಕಿಸದೇ ಅವರ ಶೈಕ್ಷಣಿಕ ಶ್ರೇಷ್ಠತೆ, ಆರ್ಥಿಕ ಬೆಂಬಲ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಬೆಳವಣಿಗೆಗೆ ಸ್ಥಿರವಾದ ಉದ್ಯೋಗದೊಂದಿಗೆ ಸಮಾನ ಪ್ರವೇಶವನ್ನು ಹೊಂದಿರುವ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ರಚಿಸುವುದು ನಮ್ಮ ಧ್ಯೇಯವಾಗಿದೆ. ವಿದ್ಯಾರ್ಥಿಗಳ ಶಿಕ್ಷಣ ನೀತಿಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹೆಚ್ಚಿಸುವ ಮೂಲಕ ನಾವು ಬಲವಾದ ವಿದ್ಯಾರ್ಥಿ ಸಮುದಾಯವನ್ನು ನಿರ್ಮಿಸಲು ಶ್ರಮಿಸುತ್ತೇವೆ. ಈಗಾಗಲೇ ರಾಜ್ಯದ ಪ್ರತಿಯೊಂದು ವಿಶ್ವ ವಿದ್ಯಾಲಯದ ಹಾಗೂ ಕಾಲೇಜುಗಳಿಗೆ ನಮ್ಮ ಸಂಘಟನೆಯ ಸದಸ್ಯರು ಹೋಗಿ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಾವು ಪಠ್ಯಕ್ರಮ ನವೀಕರಣ, ಡಿಜಿಟಲ್ ಮೌಲ್ಯಮಾಪನ, ವಿದ್ಯಾರ್ಥಿ ವೇತನವನ್ನು ತ್ವರಿತ ವಿತರಣೆ, ಹಾಸ್ಟೇಲ್ ಸುಧಾರಣೆ, ವಿದ್ಯಾರ್ಥಿಗಳ ಉದ್ಯೋಗ ಮತ್ತು ಕೌಶಲ್ಯ ವಿಕಾಸ, ಶೋಷಣೆ, ದೌರ್ಜನ್ಯ ತಡೆಗಟ್ಟುವುದು, ವಿದ್ಯಾರ್ಥಿಗಳ ಹಿತಕ್ಕಾಗಿ ಸಾಮೂಹಿಕ ಶಾಂತಿ, ಮಹಿಳಾ ಸುರಕ್ಷತೆ, ಮತ್ತು ವಿದ್ಯಾರ್ಥಿಗಳ ಸಂಘಟನೆಗೆ ಒತ್ತು ನೀಡುವುದು ನಮ್ಮ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಎನ್ಎಸ್‌ಯುಐನ ರಾಜ್ಯ ಕಾರ್ಯದರ್ಶಿ ಅನ್ವಿತ್ ಕಟೀಲ್,ಎನ್.ಎಸ್.ಯು.ಐ ರಾಷ್ಟ್ರೀಯ ಸಂಚಾಲಕ ರತೀಕ ರವಿ, ರಾಜ್ಯ ಸಂಚಾಲಕ ಶಿವಕುಮಾರ ಇದ್ದರು.
ಭಟ್ಕಳದಲ್ಲಿ ಎನ್ ಎಸ್ ಐಯು ನ್ಯಾಯ ಯಾತ್ರೆಯ ಪೋಸ್ಟರ್ ಪ್ರದರ್ಶಿಸಲಾಯಿತು.