ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಆರ್.ಮಂಜುನಾಥ್ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಎನ್‍ಎಸ್‍ವಿ ಒಂದು ಸೂಕ್ತ ಸರಳ ಚಿಕಿತ್ಸಾ ವಿಧಾನವಾಗಿದ್ದು, ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಮುಗಿಯುತ್ತದೆ. ಈ ಚಿಕಿತ್ಸೆಯಿಂದ ಪುರುಷತ್ವಕ್ಕೆ ಹಾನಿಯಿಲ್ಲವೆಂದು ಆಡಳಿತ ವೈದ್ಯಾಧಿಕಾರಿ ಡಾ.ಆರ್.ಮಂಜುನಾಥ್ ಹೇಳಿದರು. ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರು, ಅರ್ಹ ದಂಪತಿ ಮತ್ತು ಸಿಬ್ಬಂದಿಗೆ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೋ ಸ್ಕಾಲ್ ಪೆಲ್ ವ್ಯಾಸಕ್ಟಮಿ ಒಂದು ಸೂಕ್ತ ಸರಳ ವಿಧಾನವಾಗಿದ್ದು, ಮಕ್ಕಳು ಸಾಕೆಂದು ನಿರ್ಧರಿಸಿದ ದಂಪತಿ ಹೆಣ್ಣು ಮಕ್ಕಳಿಗೆ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಿಸುವುದಕ್ಕಿಂತ ಪುರುಷರು ಈ ಸರಳ ವಿಧಾನ ಅನುಸರಿಸುವುದು ಸೂಕ್ತ. ಹೆಣ್ಣು ಮಕ್ಕಳಿಗಾದರೆ ಶಸ್ತ್ರ ಚಿಕಿತ್ಸೆಯ ನಂತರ ಅವರಿಗೆ ಆರೈಕೆ ಮಾಡಲು ಹಲವು ದಿನಗಳು ಬೇಕಾಗುತ್ತದೆ. ಆದರೆ ಪುರುಷರು ಶಸ್ತ್ರಚಿಕಿತ್ಸೆಯ ನಂತರ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಅಂದೆ ಪ್ರಾರಂಭಿಸಬಹುದು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಒಬ್ಬ ತಾಯಿ 9ತಿಂಗಳು ತನ್ನ ಗರ್ಭದಲ್ಲಿರುವ ಮಗುವನ್ನ ಹೊತ್ತು, ಹೆರಿಗೆಯ ಸಮಯದಲ್ಲಿ ಹೆಚ್ಚು ನೋವನ್ನು ಅನುಭವಿಸುತ್ತಾಳೆ. ಎರಡು ವರ್ಷದ ತನಕ ಮಗುವಿಗೆ ಎದೆ ಹಾಲು ಉಣಿಸುವುದರ ಜೊತೆಗೆ ಮಗುವಿನ ಲಾಲನೆ ಪಾಲನೆ ಜವಾಬ್ದಾರಿಯಿಂದ ನಿಭಾಯಿಸುತ್ತಾ ಎಲ್ಲಾ ಕಷ್ಟವನ್ನು ಅವಳೇ ಅನುಭವಿಸುತ್ತಾಳೆ. ಆದರೆ ಪುರುಷರು ಕುಟುಂಬ ಕಲ್ಯಾಣ ಈ ಸಣ್ಣ ಶಸ್ತ್ರ ಚಿಕಿತ್ಸೆಯನ್ನು ತಾವುಗಳು ಮಾಡಿಸಿಕೊಳ್ಳುವುದರ ಮುಖಾಂತರ ತನ್ನ ಸತಿಗೆ ಸಹಭಾಗಿತ್ವದೊಂದಿಗೆ ನೆರವಾಗುವುದು ಒಳಿತು ಎಂದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಪ್ರತಿ ಸೋಮವಾರ ಮತ್ತು ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆಯನ್ನು ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಮಾಡಲಾಗುವುದು. ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿಗೆ ಸರ್ಕಾರದಿಂದ 1100 ರು. ಪ್ರೋತ್ಸಾಹಧನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಧಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಂಕರ್ ನಾಯ್ಕ. ಪ್ರವೀಣ್ ಕುಮಾರ್, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕ ಫಲಾನುಭವಿಗಳು ಹಾಜರಿದ್ದರು.