ಕನ್ನಡಪ್ರಭ ವಾರ್ತೆ ಕೊಲ್ಹಾರ
ಉತ್ತರ ಪ್ರದೇಶದ ಗಾಜಿಪುರದ ಕಿಶನಕುಮಾರ ಭಾರದ್ವಾಜ್ (33) ಮೃತಪಟ್ಟ ಕಾರ್ಮಿಕ. ಇಂಡಿಯನ್ ಬ್ಯಾಗ್ ಪ್ರೈ.ಲಿ. ಮೂಲಕ ಕಿಶನಕುಮಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ ಘಟಕದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಮಂಗಳವಾರ ಸಂಜೆ 130 ಅಡಿ ಎತ್ತರದ ಚಿಮಣಿ ಮೇಲೆ ನಿಂತು ಕೇಬಲ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಕಾರ್ಮಿಕರ ಪ್ರತಿಭಟನೆ, ಪರಿಹಾರಕ್ಕೆ ಒತ್ತಾಯ:ಘಟನೆ ಸಂಭವಿಸಿದ ಬಳಿಕ ಕೂಡಗಿ ಎನ್.ಟಿ.ಪಿ.ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಅಪಾಯಕಾರಿ ಕೆಲಸದಲ್ಲಿ ತೊಡಗುವ ಕಾರ್ಮಿಕರಿಗೆ ಯಾವುದೇ ಸೂಕ್ತ ರಕ್ಷಣೆ ಇಲ್ಲ. ರಕ್ಷಣಾತ್ಮಕ ಪರಿಕರಗಳು ಇಲ್ಲದೇ ಕೆಲಸ ಮಾಡುವ ಕಾರ್ಮಿಕರು ಈ ರೀತಿ ದುರಂತಕ್ಕೀಡಾಗಿ ಸಾವನ್ನಪ್ಪುತ್ತಿದ್ದಾರೆ. ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಸುಧಾರಿತ ರಕ್ಷಣಾತ್ಮಕ ಪರಿಕರಗಳನ್ನು ಒದಗಿಸಬೇಕು. ಮೃತ ಕಿಶನಕುಮಾರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಕ್ರೋಶಗೊಂಡು ಕಾರ್ಮಿಕರು ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಎದುರು ಪ್ರತಿಭಟನೆ ನಡೆಸಿದರು. ಈ ಸಂಬಂಧ ಕೂಡಗಿ ಎನ್.ಟಿ.ಪಿ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಥಾವರದಲ್ಲಿ ಕಾರ್ಮಿಕ ಮೃತಪಟ್ಟಿದ್ದರೂ ಎನ್‌ಟಿಪಿಸಿ ಅಧಿಕಾರಿಗಳು ಮಾತ್ರ ಒಬ್ಬಮೇಲೋಬ್ಬರು ಹಾಕುತ್ತ ಕಾಲ ದೂಡಿದ್ದಾರೆ. ಅಲ್ಲದೇ ಮೃತ ಕಾರ್ಮಿಕನ ಕುಟುಂಬಕ್ಕೆ ನಮ್ಮಿಂದ ಪರಿಹಾರ ಕೊಡಲು ಅವಕಾಶವಿಲ್ಲ. ಆತನನ್ನು ತಂದು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿದ್ದ ಇಂಡಿಯನ್ ಬ್ಯಾಗ್ ಪ್ರೈವೇಟ್ ಲಿಮಿಟೆಡ್ ಎಂಬ ಏಜನ್ಸಿಯೇ ಪರಿಹಾರ ಒದಗಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.
---
ಸುರಕ್ಷತೆಯ ಬಗ್ಗೆ ಭಾಷಣ ಮಾಡುವ ಎನ್‌ಟಿಪಿಸಿ ಅಧಿಕಾರಿಗಳು ಹಾಗೂ ಗುತ್ತಿಗೆ ಏಜನ್ಸಿಗಳು ಕಾರ್ಮಿಕರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಕಾರ್ಮಿಕರ ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಕಾರ್ಮಿಕರು ಸತ್ತಾಗಲೊಮ್ಮೆ ಹೋರಾಟ ಮಾಡಿದಾಗ ಮಾತ್ರ ಪರಿಹಾರ ಸಿಗುತ್ತದೆ. ಈಗಲೂ ಈ ಕಾರ್ಮಿಕನಿಗೆ ಸಮಪರ್ಕ ಒದಗಿಸಬೇಕಿದೆ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.