ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಅಣು ಸ್ಥಾವರ: ಡಿ. 20ರಂದೇ ಎಸಿ ಕಚೇರಿಗೆ ದಾಖಲೆ ರವಾನೆ!

KannadaprabhaNewsNetwork | Updated : Dec 31 2024, 11:55 AM IST

ಸಾರಾಂಶ

ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಅಣು ವಿದ್ಯುತ್ ಸ್ಥಾವರ ಬಗ್ಗೆ ಪ್ರಸ್ತಾಪನೆಯೇ ಇಲ್ಲ ಎಂದಿದ್ದ ಜಿಲ್ಲಾಡಳಿತ ಈಗ ತಹಸೀಲ್ದಾರ್‌ ಕಚೇರಿಯಿಂದ ಕೊಪ್ಪಳ ಸಹಾಯಕ ಆಯುಕ್ತರಿಗೆ ದಾಖಲೆಗಳನ್ನು ರವಾನಿಸಿರುವುದು ಸ್ಥಾವರ ಸ್ಥಾಪನೆಯ ಪ್ರಕ್ರಿಯೆಗೆ ಪುಷ್ಠಿ ನೀಡಿದಂತಾಗಿದೆ.

 ರಾಮಮೂರ್ತಿ ನವಲಿ

 ಗಂಗಾವತಿ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್-ಹಿರೇಬೆಣಕಲ್‌ನ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳ ಬಳಿ ಅಣು ವಿದ್ಯುತ್ ಸ್ಥಾವರ ಬಗ್ಗೆ ಪ್ರಸ್ತಾಪನೆಯೇ ಇಲ್ಲ ಎಂದಿದ್ದ ಜಿಲ್ಲಾಡಳಿತ ಈಗ ತಹಸೀಲ್ದಾರ್‌ ಕಚೇರಿಯಿಂದ ಕೊಪ್ಪಳ ಸಹಾಯಕ ಆಯುಕ್ತರಿಗೆ ದಾಖಲೆಗಳನ್ನು ರವಾನಿಸಿರುವುದು ಸ್ಥಾವರ ಸ್ಥಾಪನೆಯ ಪ್ರಕ್ರಿಯೆಗೆ ಪುಷ್ಠಿ ನೀಡಿದಂತಾಗಿದೆ.

ನ. 11ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ಸ್ಥಾವರಕ್ಕೆ ಜಮೀನು ಗುರುತಿಸಬೇಕೆಂಬ ಸೂಚನೆ ಹಿನ್ನೆಲೆ ಗಂಗಾವತಿ ತಾಲೂಕಿನ ವೆಂಕಟೇಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಚಿಕ್ಕಬೆಣಕಲ್- ಹಿರೇಬೆಣಕಲ್‌ಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಸರ್ವೆ ನ. 35ರಲ್ಲಿ ಗುರುತಿಸಿದೆ.

ಡಿ.17ರಂದು ಸರ್ವೇ:

ಚಿಕ್ಕಬೆಣಕಲ್ ಸನಿಹದಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೇ ನಂ.35ರಲ್ಲಿ ವಿಸ್ತೀರ್ಣ 2117 ಎಕರೆ, 31 ಗುಂಟೆ ಪ್ರದೇಶದ ಪೈಕಿ 1200 ಎಕರೆ ಜಮೀನನ್ನು ವಿದ್ಯುತ್ ಸ್ಥಾವರಕ್ಕೆ ಗುರುತಿಸಲಾಗಿದೆ. ಕಂದಾಯ, ತಾಲೂಕು ಭೂ ಮಾಪನ ಇಲಾಖೆ ಅಧಿಕಾರಿಗಳು ಡಿ. 17ರಂದು ಜಂಟಿಯಾಗಿ ಸರ್ವೇ ಮಾಡಿ ನಕಾಶೆ ಮೂಲಕ ವರದಿ ಸಿದ್ಧಪಡಿಸಿದ್ದಾರೆ. ಸರ್ವೇ ಮಾಡಿದ ಸರಹದ್ದಿನಲ್ಲಿಯೇ ಹಿರೇಬೆಣಕಲ್, ತೆಂಬಾ ಸೀಮೆಗಳು ಹೊಂದಿಕೊಂಡಿವೆ.

ಎಸಿ ಕಚೇರಿಗೆ ದಾಖಲೆ ರವಾನೆ:

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಚಿಕ್ಕಬೆಣಕಲ್–ಹಿರೇಬೆಣಕಲ್ ಗ್ರಾಮದ ಬಳಿ ಸ್ಥಾವರ ಸ್ಥಾಪನೆಗೆ ಗುರುತಿಸಿರುವ ನಕಾಶೆ ಮತ್ತು ವರದಿಯನ್ನು ಸಹಾಯಕ ಆಯುಕ್ತರಿಗೆ ಡಿ. 20ರಂದು ಸಲ್ಲಿಸಿದ್ದಾರೆ.

ಸರ್ವೆ ನಂ. 35ರಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 1200 ಎಕರೆ ಪ್ರದೇಶ ಗುರುತಿಸಿರುವುದು, ಚಿಕ್ಕಬೆಣಕಲ್ ಗ್ರಾಮದಿಂದ 2ರಿಂದ 3 ಕಿಮೀ ದೂರದ ಅಂತರ, ಪ್ರಸ್ತಾಪಿತ ಜಮೀನಿನಲ್ಲಿ ಐತಿಹಾಸಿಕ ಕಟ್ಟಡಗಳು, ಹೈಟೆನ್ಶನ್ ತಂತಿಗಳು ಹೋಗದೆ ಇರುವುದು, ಈ ಜಮೀನಿನಲ್ಲಿ ಫಾರಂ 50, 53, 55ಕ್ಕೆ ಅರ್ಜಿ ಹಾಕದೇ ಇರುವುದು, ಸಣ್ಣ ಪುಟ್ಟ ಕೆರೆಗಳು ಕಲ್ಲಿನಿಂದ ಕೂಡಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅಲ್ಲದೇ ಸ್ಥಾವರ ಸ್ಥಾಪನೆಗೆ ಜಮೀನು ಗುರುತಿಸುವುದಕ್ಕಾಗಿ ಪಂಚನಾಮೆ, ನಕ್ಷೆ, ಚೆಕ್ ಲಿಸ್ಟ್‌ನೊಂದಿಗೆ ಅರಣ್ಯ ಇಲಾಖೆಯ ಅನುಮತಿ ಪಡೆದು ಕಾಯ್ದಿರಿಸಬೇಕು ಎಂದು ಸಹಾಯಕ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಕಂದಾಯ ಮತ್ತು ಭೂಮಾಪನ ಇಲಾಖೆಯ ಅಧಿಕಾರಿಗಳು ಗುರುತಿಸಿರುವ ಪ್ರದೇಶದ 10 ಕಿಮೀ ಅಂತರದಲ್ಲಿಯೇ ಹಿರೇಬೆಣಕಲ್ ಐತಿಹಾಸಿಕ ಮೋರೇರ ಶಿಲಾ ಸಮಾಧಿಗಳು, ಹೇಮಗುಡ್ಡ, ಕುಮಾರರಾಮನ ಬೆಟ್ಟ, 20 ಕಿಮೀನಲ್ಲಿ ಪ್ರಸಿದ್ಧ ಅಂಜನಾದ್ರಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳು ಇರುವುದು ಪರಿಸರವಾದಿಗಳು, ಗ್ರಾಮಸ್ಥರು, ಸಂಶೋಧಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಇಷ್ಟೆಲ್ಲ ಪ್ರಕ್ರಿಯೆ ನಡೆದಿದ್ದರೂ ಅಧಿಕಾರಿಗಳು ಸ್ಥಾವರದ ಬಗ್ಗೆ ಪ್ರಸ್ತಾವನೆಯೇ ಇಲ್ಲ ಎಂದು ಹೇಳಿರುವುದು ಸಮಂಜಸವೇ ಎನ್ನುತ್ತಾರೆ ಗ್ರಾಮಸ್ಥರು.

Share this article