ಪರಮಾಣು ವಿದ್ಯುತ್ ಸ್ಥಾವರ ಮತ್ತೆ ಮುನ್ನೆಲೆಗೆ, ಆಕ್ರೋಶ

KannadaprabhaNewsNetwork |  
Published : Apr 29, 2026, 02:15 AM IST
ಆಗಿಲ್ಲ  | Kannada Prabha

ಸಾರಾಂಶ

ರಾಜ್ಯಾದ್ಯಂತ ಗುರುತಿಸಿರುವ ಐದು ಸ್ಥಳಗಳ ಪೈಕಿ ಬಂಡೆಕುಂಟಾ ಗ್ರಾಮ ಒಂದಾಗಿದೆ. ಐದು ಸಂಭಾವ್ಯ ಸ್ಥಳಗಳಲ್ಲಿ ವೈಜ್ಞಾನಿಕ ಅಧ್ಯಯನ ಮತ್ತು ಬೋರ ಹೋಲ್ ಕೊರೆಯುವ ಮೂಲಕ ಭೂವೈಜ್ಞಾನಿಕ ಪರಿಶೀಲನೆ ಕೈಗೊಳ್ಳುವ ದಿಸೆಯಲ್ಲಿ ಸಭೆಯ ಸೂಚನಾ ಪತ್ರವೊಂದು ಹರಿದಾಡುತ್ತಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ತಾಲೂಕಿನ ಬಂಡೆಕುಂಟಾ ಗ್ರಾಮದ ಬಳಿ, ಅದರಲ್ಲೂ ವಿಶ್ವಪಾರಂಪರಿಕ ತಾತ್ಕಾಲಿಕ ತಾಣವಾಗಿರುವ ಹಿರೇಬೆಣಕಲ್ ಕೂಗಳತೆ ದೂರದಲ್ಲಿಯೇ ಮತ್ತೆ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆ ತಾಲೂಕಿನ ವಿವಿಧೆಡೆ ಸ್ಥಳ ಪರಿಶೀಲನೆ ನಡೆದಾಗಲೂ ತೀವ್ರ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆ ನಡೆದಿತ್ತು. ಇದಲ್ಲದೆ ಗಂಗಾವತಿ ತಾಲೂಕಿನ ಹಳೆಕುಂಟಾ ಬಳಿಯೂ ಸ್ಥಳ ಗುರುತಿಸಿದ್ದಾರೆ ಎಂದಾಗಲೂ ದೊಡ್ಡ ಪ್ರತಿಭಟನೆ ನಡೆಯಿತು. ಕೊನೆಗೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದ ಯಾವುದೇ ಪ್ರದೇಶದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವುದು ಬೇಡ ಎನ್ನುವ ತೀರ್ಮಾನ ಮಾಡಿದ ಮೇಲೆ ನಿಟ್ಟುಸಿರು ಬಿಟ್ಟಿದ್ದರು. ಈ ನಡುವೆ ಈಗ ಮತ್ತೊಂದು ಪರಮಾಣ ವಿದ್ಯುತ್ ಸ್ಥಾವರ ಕೊಪ್ಪಳ ತಾಲೂಕಿನಲ್ಲಿ ಸ್ಥಾಪಿಸುವ ಕುರಿತು ವಿಷಯ ಮುನ್ನೆಲೆಗೆ ಬಂದಿದ್ದು, ದೊಡ್ಡ ಆತಂಕಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ಗುರುತಿಸಿರುವ ಐದು ಸ್ಥಳಗಳ ಪೈಕಿ ಬಂಡೆಕುಂಟಾ ಗ್ರಾಮ ಒಂದಾಗಿದೆ. ಐದು ಸಂಭಾವ್ಯ ಸ್ಥಳಗಳಲ್ಲಿ ವೈಜ್ಞಾನಿಕ ಅಧ್ಯಯನ ಮತ್ತು ಬೋರ ಹೋಲ್ ಕೊರೆಯುವ ಮೂಲಕ ಭೂವೈಜ್ಞಾನಿಕ ಪರಿಶೀಲನೆ ಕೈಗೊಳ್ಳುವ ದಿಸೆಯಲ್ಲಿ ಸಭೆಯ ಸೂಚನಾ ಪತ್ರವೊಂದು ಹರಿದಾಡುತ್ತಿದೆ. ಅದರಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸಹ ವರದಿ ಕೇಳಿರುವ ಮಾಹಿತಿ ಇರುವುದೇ ಈಗ ಆತಂಕಕ್ಕೆ ಕಾರಣವಾಗಿದೆ.

ಫೆ.2 ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್. ಹೊಸಮಠ ರುಜು ಮಾಡಿರುವ ಆದೇಶದ ಪ್ರತಿಯಲ್ಲಿ ಬಂಡೆಕುಂಟಾ ಉಲ್ಲೇಖ ಮಾಡಲಾಗಿದೆ. ಆದರೆ, ಇದರಲ್ಲಿ ಬನ್ನಿಕುಂಟಾ ಎಂದು ತಪ್ಪಾಗಿ ನಮೂದಿಸಲಾಗಿದೆ.

ಪುರಾತತ್ವ ಸ್ಥಳಗಳು:

ಕೊಪ್ಪಳ ತಾಲೂಕಿನಲ್ಲಿ ಈಗ ಗುರುತಿಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ವಿಶ್ವವಿಖ್ಯಾತ ಹಿರೇಬೆಣಕಲ್ ಶಿಲಾಸಮಾಧಿ ಇರುವುದು ಒಂದು ಕಡೆಯಾದರೆ ಇದು ಅರಣ್ಯ ಪ್ರದೇಶವಾಗಿದ್ದರಿಂದ ಕರಡಿ, ಚಿರತೆ ಸೇರಿದಂತೆ ಪ್ರಾಣಿ ಸಂಕುಲವೇ ಇಲ್ಲಿ ನೆಲಸಿದೆ. ಬಯಲು ಸೀಮೆಯ ಕಾಡುಪ್ರಾಣಿಗಳ ಸ್ವರ್ಗ ಎಂದೇ ಕರೆಯುವ ಪ್ರದೇಶ ಇದಾಗಿದೆ. ಅಚ್ಚರಿ ಎಂದರೆ ಇಲ್ಲಿಗೆ ವಿಶ್ವವಿಖ್ಯಾತ ಹಂಪಿ ಮತ್ತು ಆನೆಗೊಂದಿಯೂ ಹತ್ತಿರದಲ್ಲೇ ಇದೆ. ಹೀಗಾಗಿ, ಈ ಸ್ಥಳ ಸೂಕ್ತವೇ ಅಲ್ಲ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಎನ್ನುವ ಆಗ್ರಹ ಸ್ಥಳೀಯವಾಗಿ ಬಲವಾಗಿ ಕೇಳಿ ಬರುತ್ತಿದೆ.ಮಾಹಿತಿ ಕೇಳಿದ್ದು ನಿಜ.ಆದರೆ, ಇದಕ್ಕೆ ಸ್ಥಳೀಯವಾಗಿಯೇ ತೀವ್ರ ವಿರೋಧ ಇದೆ ಎಂದು ಹೇಳಿದ್ದೇವೆ. ಅಲ್ಲದೆ ಯಾವುದೇ ಪ್ರಸ್ತಾವನೆ ಸಹ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ತಿಳಿಸಿದ್ದಾರೆ.

ವಿಶ್ವವಿಖ್ಯಾತ ತಾಣಗಳು ಮತ್ತು ಪ್ರಾಣಿ ಸಂಕುಲ ಇರುವುದರಿಂದ ಯಾವುದೇ ಕಾರಣಕ್ಕೂ ನಾವು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಬಿಡುವುದಿಲ್ಲ. ಈ ಹಿಂದೆಯೂ ಹೋರಾಟ ಮಾಡಿದ್ದು, ಈಗ ಪುನಃ ಮುನ್ನೆಲೆಗೆ ಬಂದಿದೆ. ಹೀಗಾಗಿ, ಮತ್ತೊಂದು ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಮಾಜಿ ವಿಪ ಸದಸ್ಯ ಎಚ್.ಆರ್. ಶ್ರೀನಾಥ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ಸದೃಢ: ವಿವೇಕ ಯಾವಗಲ್‌
ವಿಮಾನ ನಿಲ್ದಾಣಗಳಿಗೆ ಸಾಧಕರ ಹೆಸರಿಡಲು ಆಗ್ರಹ