ನುಲಿಯ ಚಂದಯ್ಯ ಶ್ರಮ, ಕಾಯಕ ಸಂಸ್ಕೃತಿಯನ್ನು ನಂಬಿದವರು: ಡಾ.ಎಚ್.ಸಿ.ಮಹದೇವಪ್ಪ

KannadaprabhaNewsNetwork |  
Published : Sep 09, 2024, 01:35 AM IST
7 | Kannada Prabha

ಸಾರಾಂಶ

ಶೋಷಿತ ಸಮುದಾಯದ ಏಳಿಗೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಸಾಮಾಜಿಕ ಮತ್ತು ಆರ್ಥಿಕ ಸಬಲತೆಗಾಗಿ ಸರ್ಕಾರವು ಸಮುದಾಯದ ಪರ ಸದಾ ಇರಲಿದೆ. ಸಮಾನತೆ ಹಾಗೂ ಸಮಾನ ಅವಕಾಶಗಳು ಸಂವಿಧಾನದ ಆಶಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೂಲಭೂತವಾದ ಮತ್ತು ಮೂಢನಂಬಿಕೆ ವಿರುದ್ಧ ಚಳವಳಿಯನ್ನು ಹುಟ್ಟು ಹಾಕಿದ ಬಸವಣ್ಣನ ಸಮಕಾಲಿನವರಾದ ಶ್ರೀ ನುಲಿಯ ಚಂದಯ್ಯ ಅವರು ಶ್ರಮ ಹಾಗೂ ಕಾಯಕ ಸಂಸ್ಕೃತಿಯನ್ನು ನಂಬಿದವರು. ಸದಾ ಕಾಯಕ ಮತ್ತು ದಾಸೋಹ ಪರಿಕಲ್ಪನೆಯಲ್ಲಿ ತನ್ಮಯರಾಗಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಲಿಯ ಚಂದಯ್ಯ ಸಮಸಮಾಜದ ನಿರ್ಮಾಣ ಮಾಡಲು ಸಾಮಾಜಿಕ ಪಿಡುಗು ಹಾಗೂ ಮೂಢನಂಬಿಕೆ ವಿರುದ್ಧ ಜನರಿಗೆ ಅರಿವು ಮೂಡಿಸಿದರು ಎಂದರು.

ಶೋಷಿತ ಸಮುದಾಯದ ಏಳಿಗೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಸಾಮಾಜಿಕ ಮತ್ತು ಆರ್ಥಿಕ ಸಬಲತೆಗಾಗಿ ಸರ್ಕಾರವು ಸಮುದಾಯದ ಪರ ಸದಾ ಇರಲಿದೆ. ಸಮಾನತೆ ಹಾಗೂ ಸಮಾನ ಅವಕಾಶಗಳು ಸಂವಿಧಾನದ ಆಶಯವಾಗಿದೆ. ಅದನ್ನು ಸಾಕಾರಗೊಳಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿ, ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವುದೇ ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ. 12ನೇ ಶತಮಾನದ ಶರಣ ಚಳವಳಿಯನ್ನ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳನ್ನು ಪ್ರತಿಪಾದನೆ ಮಾಡುತ್ತ ವೈದಿಕಶಾಹಿಗಳು ಶ್ರಮ ಜೀವನಕ್ಕೆ ಒಗ್ಗದೆ ಕಾಯಕ ಸಮುದಾಯಗಳಲ್ಲಿ ಮೂಢನಂಬಿಕೆ ಬಿತ್ತು, ಅನೇಕ ಸಂಪ್ರದಾಯಗಳನ್ನು ಹೇರಿದರು. ಇದರ ವಿರುದ್ಧ ಬಸವಣ್ಣ ಅವರು ಹೋರಾಟ ನಡೆಸಿದರು ಎಂದರು.

ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನಿರುವುದು ನಿಮಗಾಗಿ, ನೀವಿರುವುದು ನಮಗಾಗಿ, ನಾಡಿರುವುದು ನಮಗಾಗಿ ಎಂಬ ಸಂದೇಶದಂತೆ ಯುವಕರು ಶರಣರ ಸಾಹಿತ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದರು.

ಕುಂದೂರು ಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಮಾರು 70 ವರ್ಷ ನುಲಿಯ ಚಂದಯ್ಯ ಅವರು ಬದುಕಿದ್ದರೂ ಅವರ ಇಡೀ ಜೀವನ ಕಾಯಕದಲ್ಲೇ ಮುಳುಗಿತ್ತು. ಲಿಂಗವು ಮುಖ್ಯವಲ್ಲ ಕಾಯಕದ ಮುಂದೆ ಅಂತಹ ಕಾಯಕಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟ ಮಹಾನ್ ನಾಯಕನ ಸಮಾಜಕ್ಕೆ ನಾವು ನೀವೆಲ್ಲರೂ ಸೇರಿದ್ದೇವೆ ಎಂದರು.

ಮಹದೇಶ್ವರಬೆಟ್ಟದ ಸಾಲೂರು ಬ್ರಹ್ಮ ಮಠದ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಜಿ. ಚಂದ್ರಣ್ಣ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಎಕೆಎಂಎಸ್ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಎನ್. ಮುನಿರಾಜು, ನಿವೃತ್ತ ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.

ಭಾರತವು ಅನೇಕ ಧರ್ಮ, ಭಾಷೆ, ವೈವಿಧ್ಯವಾದ ಆಚಾರದ ವಿಚಾರದ ನಡುವೆ ಏಕತೆಯನ್ನು ಕಾಣುತ್ತ ಬಂದಿದೆ. ಈ ದೇಶದ ಮೂಲನಿವಾಸಿಗಳು ದಲಿತರು. ಈ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿಗೆ ಸಂವಿಧಾನವಿದೆ. ಇದರೊಂದಿಗೆ ಅನುಭವ ಮಂಟಪದ ವಿಚಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ.

- ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ