ಶಿವಮೊಗ್ಗ: ನುಲಿಯ ಚಂದಯ್ಯ ಕಾಯಕದ ಸಮೂಹಕ್ಕೆ ಹೆಚ್ಚು ಶಕ್ತಿಯನ್ನು ತುಂಬುವ ಮೂಲಕ ಕಾಯಕವು ಎಲ್ಲರ ಜೀವನಕ್ಕೆ ಅತ್ಯವಶ್ಯಕವಾಗಿದೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ನುಲಿಯ ಚಂದಯ್ಯ ಕಾಯಕಕ್ಕೆ ಹೆಸರು ವಾಸಿಯಾದವರು. ಇವರು ಸುಮಾರು 48 ವಚನಗಳನ್ನು ರಚಿಸಿದ್ದು, ಆ ಮೂಲಕ ಕಾಯಕ ಸಮೂಹಕ್ಕೆ ಹೆಚ್ಚು ಶಕ್ತಿಯನ್ನು ತುಂಬಿದ್ದಾರೆ. ಕಾಯಕ ಎಲ್ಲರ ಜೀವನಕ್ಕೆ ಅತಿ ಅವಶ್ಯಕ ಎನ್ನುವ ಮೂಲಕ ಇಡೀ ಮನುಕುಲಕ್ಕೆ ಶಕ್ತಿಯ ತುಂಬಿದ್ದರು. ಕಾಯಕ ಇಲ್ಲದೆ ಜೀವನ ಸಾಗಿಸುವುದು ಕಷ್ಟಕರ ಎಂದಿದ್ದ ಅವರು ನಾಯಕತ್ವವನ್ನು ಪಡೆಯುವ ವ್ಯಕ್ತಿ ಸಮಾಜಕ್ಕೆ ಏನೇನು ಮಾಡಬೇಕೆಂದು ಸಲಹೆಯನ್ನು ಕೂಡ ಅವರು ನೀಡಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯ ತುಂಗಾ ಪ್ರದೇಶಕ್ಕೆ ಬರುವ ಚಂದಯ್ಯನವರು ಪದ್ಮಾವತಿ ಎಂಬ ಊರಿಗೆ ಬರುತ್ತಾರೆ. ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿ ಚಂದಯ್ಯನವರಿಂದ ಧರ್ಮೊಪದೇಶವನ್ನು ಪಡೆದು ಅವರ ಅಪ್ಪಣೆಯ ಪ್ರಕಾರ ಒಂದು ಕೆರೆಯನ್ನು ಕಟ್ಟಿಸುತ್ತಾರೆ. ಆ ಕೆರೆಗೆ ಇಂದಿಗೂ ಪದ್ಮಾವತಿ ಎಂದು ಸರ್ಕಾರಿ ದಾಖಲೆಗಳುಂಟು. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಚಂದಯ್ಯನವರಿಗೊಸ್ಕರ ಮೂರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ. ಮೂರಂಕಣದ ಮಠದಲ್ಲಿ ಚಂದಯ್ಯ ತಮ್ಮ ಕೊನೆಕಾಲದವರೆಗೂ ಅನುಭಾವ ಗೋಷ್ಠಿ ನಡೆಸುತ್ತಿದ್ದರು. ಅವರು ಲಿಂಗೈಕ್ಯರಾದಾಗ ಅವರ ಕ್ರಿಯಾ ಸಮಾಧಿಯನ್ನು ಆ ಮಠದಲ್ಲೇ ಮಾಡಲಾಗಿತ್ತು ಎಂದು ತಿಳಿಸಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ನುಲಿಯ ಚಂದಯ್ಯ 12ನೇ ಶತಮಾನದಲ್ಲಿ ಬಸವಣ್ಣರಿಗೆ ಬಹಳ ಪ್ರಿಯವಾದ ವಚನಕಾರರಾಗಿದ್ದು, ಅವರು ತಾನು ದುಡಿದು ಜೀವನ ಸಾಗಿಸಬೇಕು ಹೊರತು ಬೇರೆ ಅವರ ದುಡ್ಡಲ್ಲಿ ಜೀವನ ಸಾಗಿಸಬಾರದು ಎನ್ನುತ್ತಿದ್ದರು. ಇಂತಹ ಮಹನೀಯರ ಜಯಂತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ಆಶಯಗಳಿಗೆ ಗೌರವಿಸಬೇಕು. ಶಾಲಾ ಹಾಗೂ ಕಾಲೇಜಿನಲ್ಲೂ ಈ ಮಹನೀಯರ ಕಾರ್ಯಕ್ರಮಗಳನ್ನು ಆಚರಣೆ ಮಾಡುವ ಮೂಲಕ ಮಕ್ಕಳಿಗೆ ಇವರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕುರಿತು ಸರ್ಕಾರದ ಬಳಿಯೂ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ಕೊರಮ, ಕೊರಚ ಸಮುದಾಯಗಳು ಈಗ ಅಲೆಮಾರಿ ಪಟ್ಟಿಯಲ್ಲಿದ್ದು, ಅತ್ಯಂತ ಹಿಂದುಳಿದಿದ್ದಾರೆ. ಉದ್ಯೋಗ, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಅರಿವಿಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ನಮ್ಮ ಸೌಲಭ್ಯಗಳನ್ನು ಪಡೆಯಲು ಇರುವ ಒಂದೇ ಮಾರ್ಗ ಅದು ಸಂಘಟನೆ. ಸಂಘಟನೆ ಕಟ್ಟಿದಾಗ ಮಾತ್ರ ನಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕರು ರಮೇಶ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಸೀಲ್ದಾರ್ ರಾಜೀವ್, ಕೊರಚ ಸಮಾಜದ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಮತ್ತಿತರರಿದ್ದರು.