ಗದಗ: 12ನೇ ಶತಮಾನದ ಶಿವಶರಣ ನುಲಿಯ ಚಂದಯ್ಯ ಅವರ ಕಾಯಕ ನಿಷ್ಠೆ ಹಾಗೂ ದುಡಿಮೆಯೇ ದೇವರು ಎಂಬ ಸಂದೇಶ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನುಲಿಯ ಚಂದಯ್ಯ ಅವರ ಜೀವನ ಹಾಗೂ ವಿಚಾರಧಾರೆ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬಿಯಾಗಿ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ಅವರ ಬದುಕಿನ ಪ್ರಮುಖ ಸಂದೇಶಗಳಾಗಿವೆ. ಇಂತಹ ಮಹನೀಯರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು ಎಂದು ಹೇಳಿದರು.
ದಲಿತ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಶರಣರ ವಿಚಾರಧಾರೆಗಳು ಸಾಮಾಜಿಕ ಪರಿವರ್ತನೆಗೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಸುಮಾರು 70 ವರ್ಷಗಳ ಕಾಲ ಬದುಕಿದ್ದ ಚಂದಯ್ಯ ಅವರ ಕಾಲಘಟ್ಟ ಹಾಗೂ ಜೀವನದ ಕುರಿತು ಇನ್ನಷ್ಟು ಸಮಗ್ರ ಸಂಶೋಧನೆಗಳು ನಡೆಯಬೇಕಿದೆ ಎಂದು ವಿವರಿಸಿದರು.ಈ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.