ರೋಟರಿ ಸೇರ್ಪಡೆಯಾಗುವವರ ಸಂಖ್ಯೆ ಭಾರತದಲ್ಲಿಯೇ ಅಧಿಕ: ಡಾ.ದೀಪಕ್ ಪುರೋಹಿತ್

KannadaprabhaNewsNetwork | Published : Aug 13, 2024 12:45 AM

ಸಾರಾಂಶ

7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚರ್ಚ್‌ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ವ ಮತ್ತು ಪಬ್ಲಿಕ್ ಇಮೇಜ್ ಸಮಾವೇಶ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅನುಸರಿಸಿ ಮುನ್ನುಗ್ಗುತ್ತಿರುವ ರೋಟರಿ ಇದೇ ಕಾರಣದಿಂದಾಗಿಯೇ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ 119 ವರ್ಷಗಳಿಂದಲೂ ಮುನ್ನಡೆದಿದೆ ಎಂದು ಮುಂಬೈನ ರೋಟರಿ ಪ್ರಮುಖ ಡಾ.ದೀಪಕ್ ಪುರೋಹಿತ್ ಹೇಳಿದ್ದಾರೆ.7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ಚರ್ಚ್‌ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯಿಂದ ಆಯೋಜಿತ ರೋಟರಿ ಸದಸ್ಯತ್ವ ಮತ್ತು ಪಬ್ಲಿಕ್ ಇಮೇಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರೋಟರಿಯಲ್ಲಿ ಪ್ರಸ್ತುತ 11,34 ಲಕ್ಷ ಸದಸ್ಯರು ವಿಶ್ವವ್ಯಾಪಿ ಇದ್ದಾರೆ, ಕಳೆದ ವರ್ಷದ ಜುಲೈನಿಂದ ಈವರೆಗೂ 19,400 ಹೊಸ ಸದಸ್ಯರನ್ನು ರೋಟರಿ ಹೊಂದಿದೆ. 36,860 ರೋಟರಿ ಕ್ಲಬ್ ಗಳು ಜಗತ್ತಿನಲ್ಲಿವೆ, ರೋಟರಿ ಸದಸ್ಯರ ಪೈಕಿ ಶೇ.26ರಷ್ಟು ಮಹಿಳಾ ಸದಸ್ಯರಿರುವುದು ಹೆಗ್ಗಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ಹೊಸಬರು ರೋಟರಿ ಸದಸ್ಯರಾಗಿ ಸೇರ್ಪಡೆಯಾಗುತ್ತಿರುವುದು, ಸೇವಾ ಕಾರ್ಯಗಳಿಗೆ ಭಾರತೀಯರು ನೀಡಿದ ಮನ್ನಣೆಗೆ ಸಾಕ್ಷಿಯಾಗಿದೆ ಎಂದರು.

ಕೊಡಗನ್ನೊಳಗೊಂಡ ನಾಲ್ಕು ಕಂದಾಯ ಜಿಲ್ಲೆಗಳಿರುವ ರೋಟರಿ ಜಿಲ್ಲೆ 3181ನಲ್ಲಿ ಈ ವರ್ಷ 3550 ಸದಸ್ಯರಿದ್ದು, ಕಳೆದ 1 ವರ್ಷದಲ್ಲಿ 100 ಹೊಸ ಸದಸ್ಯರ ಸೇರ್ಪಡೆಯಾಗಿದೆ. ನೂತನವಾಗಿ ರೋಟರಿ ಸಂಸ್ಥೆಗಳಿಗೆ ಸೇರುವ ಸದಸ್ಯರಿಗೆ ಮತ್ತಷ್ಟು ಮಾಹಿತಿಯ ಅಗತ್ಯವಿದ್ದು, ಹೀಗಾದಾಗ ಶಾಶ್ವತವಾಗಿ ಅಂಥವರು ಸದಸ್ಯರಾಗಿ ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ರೋಟರಿ ಮಾಜಿ ಗವರ್ನರ್ ಹೊಸಪೇಟೆಯ ಗೋಪಿನಾಥ್ ಮಾತನಾಡಿ, ರೋಟರಿಯಲ್ಲಿ ಜನಸೇವೆಗಾಗಿನ ಅತ್ಯುತ್ತಮ ಯೋಜನೆಗಳಿಗೆ ಎಂದಿಗೂ ಅನುದಾನದ ಕೊರತೆ ಬಾಧಿಸದರು. ಜಗತ್ತಿನ ಎಲ್ಲಿಂದಲೇ ಆದರೂ ಯೋಜನೆಗಳಿಗೆ ಹಣದ ನೆರವು ದೊರಕುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ರೋಟರಿ ಮಾಜಿ ಗವರ್ನರ್ ಚೆನ್ನೈನ ಮುನಿ ಗಿರೀಶ್, ಪಬ್ಲಿಕ್ ಇಮೇಜ್ ರೋಟರಿಗೆ ಅತ್ಯಂತ ಅಗತ್ಯವಾಗಿದ್ದು, ಸಾಮಾಜಿಕ ಸೇವಾ ವಲಯದಲ್ಲಿ ರೋಟರಿ ಯೋಜನೆಗಳನ್ನು ಕೇಂದ್ರೀಕರಿಸಿ ವಿನೂತನ ಕಾರ್ಯಯೋಜನೆ ಜಾರಿಗೊಳಿಸಿದರೆ ಸಾರ್ವಜನಿಕರ ಪ್ರಶಂಸೆ ಖಂಡಿತಾ ಎಂದು ಕಿವಿಮಾತು ಹೇಳಿದರು.

ರೋಟರಿ ಜಿಲ್ಲೆ 3181ನ ಗವರ್ನರ್ ವಿಕ್ರಂದತ್ತ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗೆ ಸೇರಲು ಸಮಯ ಇಲ್ಲ ಎಂಬುದು ಸರಿಯಾದ ವಾದವಲ್ಲ. ಸಮಾಜಸೇವೆ ಮಾಡಲು ಪ್ರತೀಯೋರ್ವರೂ ಸಮಯ ಮಾಡಿಕೊಂಡಲ್ಲಿ ಖಂಡಿತಾ ಅಂಥವರಿಗೆ ರೋಟರಿ ಸೂಕ್ತ ಅವಕಾಶ ನೀಡುತ್ತದೆ ಎಂದರು.

ಇದೇ ಸಂದರ್ಭ ರೋಟರಿ ಸದಸ್ಯತ್ವ ಕುರಿತ ಸಂವಾದದಲ್ಲಿ ರೋಟರಿ ಪ್ರಮುಖರಾದ ಅನಿಲ್ ಎಚ್.ಟಿ., ಬಿ.ಜಿ. ಅನಂತಶಯನ, ಡಾ. ಸಿ.ಆರ್.ಪ್ರಶಾಂತ್, ರಾಘವೇಂದ್ರ, ಜಗದೀಶ್, ರಚನಾ ನಾಗೇಶ್, ಪಿ.ಆರ್.ಭಟ್ ಪಾಲ್ಗೊಂಡಿದ್ದರು.

ರೋಟರಿ ಜಿಲ್ಲೆ 3181ನ ಮಾಜಿ ಗವರ್ನರ್‌ಗಳಾದ ಸುರೇಶ್ ಚಂಗಪ್ಪ, ಡಾ.ರವಿ ಅಪ್ಪಾಜಿ, ರವೀಂದ್ರ ಭಟ್, ಡಾ. ನಾಗಾರ್ಜುನ, ದೇವದಾಸ್ ರೈ, ಪ್ರಕಾಶ್ ಕಾರಂತ್, ಕೃಷ್ಣ, ಮುಂದಿನ ಸಾಲಿನ ಗವರ್ನರ್ ರಾಮಕೃಷ್ಣ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್, ಕುಶಾಲನಗರ ರೋಟರಿ ಅಧ್ಯಕ್ಷ ಸಿ.ಬಿ. ಹರೀಶ್, ವಲಯ 6ರ ಸಹಾಯಕ ಗವರ್ನರ್ ಡಾ. ಹರಿಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಪಿ.ಆರ್. ನವೀನ್ ಇದ್ದರು.* ಪ್ರಶಂಸನಾ ಪತ್ರ

ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಸೇರಿದ ರೋಟರಿ ಸಂಸ್ಥೆಗಳ 450ಕ್ಕೂ ಅಧಿಕ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅತ್ಯಧಿಕ ಸದಸ್ಯರ ನೋಂದಣಿಗಾಗಿ ಮಡಿಕೇರಿಯ ರೋಟರಿ ವುಡ್ಸ್ ಮತ್ತು ಸೋಮವಾರಪೇಟೆ ರೋಟರಿ ಹಿಲ್ಸ್, ಕೊಡ್ಲಿಪೇಟೆ ರೋಟರಿ ಸಂಸ್ಥೆಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.

Share this article