ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕೂಸಿನ ಮನೆ ಸಹಕಾರಿ:ಇಒ ಜನಗಿ

KannadaprabhaNewsNetwork | Published : Feb 8, 2024 1:30 AM

ಸಾರಾಂಶ

ಸರ್ಕಾರ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳ ಆರೈಕೆ ಮಾಡಲು ಗ್ರಾಪಂಗೊಂದು ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿ

ಗದಗ: ಗ್ರಾಮೀಣ ಪ್ರದೇಶದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕೂಸಿನ ಮನೆ ಸಹಕಾರಿಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಜನಗಿ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಕೂಸಿನ ಮನೆಯ ಆರೈಕೆದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರ ಕೂಸಿನ ಮನೆ ಎಂಬ ಹೊಸ ಯೋಜನೆ 2023 ವರ್ಷದ ಆಯವ್ಯಯದಲ್ಲಿ ಘೋಷಿಸಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೂಲಿಕಾರರು, ತಮ್ಮ ಕೆಲಸದ ಅವಧಿಯಲ್ಲಿ ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡುವುದು ಒಂದು ಸವಾಲಿನ ಪ್ರಶ್ನೇಯೇ ಆಗಿತ್ತು, ಆದರೆ ಮುಂದುವರೆದ ಪಟ್ಟಣಗಳಲ್ಲಿ ದುಡಿಯುವ ಕೆಲಸಗಾರರು ತಮ್ಮ ಮಕ್ಕಳನ್ನು ದುಡ್ಡು ಕೊಟ್ಟು ಕ್ರಶ್‌ ಗೆ ಕಳಿಸುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ,ಪಾಲನೆ, ಪೋಷಣೆ ಮತ್ತು ಆರೋಗ್ಯದ ಹಿತ ದೃಷ್ಠಿಯಿಂದ ಕೂಸಿನ ಮನೆಗಳನ್ನು ಪ್ರತಿಯೊಂದು ಗ್ರಾಪಂಗೆ ಒಂದರಂತೆ ಪ್ರಾರಂಭಿಸಿದೆ. ಅದರಂತೆ ಗದಗ ತಾಲೂಕಿನ 13 ಗ್ರಾಪಂಗಳಲ್ಲಿ ಕೂಸಿನ ಮನೆ ಪ್ರಾರಂಭಿಸಿದೆ. ಅಲ್ಲದೇ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿಕಾರರ ಮಕ್ಕಳಿಗೂ ಈ ಕೂಸಿನ‌ ಮನೆಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸರ್ಕಾರ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳ ಆರೈಕೆ ಮಾಡಲು ಗ್ರಾಪಂಗೊಂದು ಕೂಸಿನ ಮನೆ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಕೂಸಿನ ಮನೆ ಯಶಸ್ವಿಗೆ ಗ್ರಾಪಂ ಮಟ್ಟದ ಕೂಸಿನ ಮನೆ ನಿರ್ವಹಣಾ ಸಮಿತಿಯ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿತ್ಯ ದುಡಿದು ಜೀವನ ನಿರ್ವಹಣೆ ಮಾಡುವ ಕುಟುಂಬಗಳ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಲ್ಲಿ ಯಾರಾದರೂ ಒಬ್ಬರು ದಿನದ ಕೆಲಸ ಬಿಟ್ಟು ಮಕ್ಕಳ ಆರೈಕೆ ಮಾಡಬೇಕು. ಕುಟುಂಬದ ಒಬ್ಬರ ದುಡಿಮೆಯಲ್ಲಿ ಜೀವನ ನಿರ್ವಹಿಸುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಕೂಸಿನ ಮನೆ ಯೋಜನೆ ಜಾರಿಗೆ ತಂದಿದೆ ಎಂದರು.

ಈ ವೇಳೆ ಗ್ರಾಪಂ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಪಂ.ರಾ ಸಹಾಯಕ ನಿರ್ದೇಶಕಿ ಅಶ್ವಿನಿ ಕುರಡಗಿ, ಹಿರಿಯ ಮೇಲ್ವಿಚಾರಕಿ ಲಲಿತಾ ಅಳವಂಡಿ, ಕೂಸಿನ ಮನೆ ನೋಡಲ್ ಅಧಿಕಾರಿಗಳು, ಜಿಪಂ ಐಇಸಿ ಸಂಯೋಜಕ ವಿ.ಎಸ್. ಸಜ್ಜನ, ತಾಲೂಕು ಐಇಸಿ ಸಂಯೋಜಕ ವೀರೇಶ ಪಟ್ಟಣಶೆಟ್ಟಿ ಹಾಗೂ ತಾಪಂ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Share this article