ಶುಶ್ರೂಷಕ ವೃತ್ತಿ ಉದ್ಯೋಗವಲ್ಲ, ಇದೊಂದು ಸೇವೆ: ರಾಮಕೃಷ್ಣ ರೆಡ್ಡಿ ಅಭಿಮತ

KannadaprabhaNewsNetwork |  
Published : Mar 09, 2024, 01:35 AM IST
ಸಿಕೆಬಿ-1 ಶಾಂತಾ ಕಾಲೇಜಿನಲ್ಲಿ ಶುಶ್ರೂಷಕ ಸೇವೆ ಪ್ರಮಾಣ ವಚನ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಡಾ.ರಾಮಕೃಷ್ಣಾ ರೆಡ್ಡಿ ಮಾತನಾಡಿದರು | Kannada Prabha

ಸಾರಾಂಶ

ಮಾನವನ ಶರೀರ ವಿಜ್ಞಾನದ ಬಗ್ಗೆ ಆಳವಾದ ಜ್ಞಾನಪಡೆಯುವ ಜೊತೆಗೆ ರೋಗಿಗಳ ತಪಾಸಣೆ, ಪರೀಕ್ಷೆ, ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನ ಕೌಶಲಗಳ ಬಗ್ಗೆ ಚಿಕಿತ್ಸೆ ಮತ್ತು ಆರೈಕೆಗಳಲ್ಲಿ ರೋಗಿಗಳ ಹತ್ತಿರವಿದ್ದು ಆತ್ಮವಿಶ್ವಾಸ ಮೂಡಿಸಿ ಅವರ ಪ್ರೀತಿ, ಗೌರವಗಳಿಗೆ ಪಾತ್ರರಾಗುವರೇ ನಿಜವಾದ ಶುಶ್ರೂಷಕರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶುಶ್ರೂಷಕ ವೃತ್ತಿಯು ಕೇವಲ ಉದ್ಯೋಗವಲ್ಲ, ಇದೊಂದು ಜೀವನ ಪರ್ಯಂತ ಮಾಡುವ ರೋಗಿಗಳ ಸೇವೆ ಎಂದು ಭಾವಿಸಿ ರೋಗಿಗಳನ್ನು ಆತ್ಮವಿಶ್ವಾಸದತ್ತ ನೋಡಿಕೊಳ್ಳುವ ಮಾನವೀಯ ಗುಣ ಎಂದು ಬೆಂಗಳೂರು ವೈದ್ಯಕೀಯ ಶಿಕ್ಷಣ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಡಾ.ರಾಮಕೃಷ್ಣ ರೆಡ್ಡಿ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಶಾಂತಾ ವೈದ್ಯಕೀಯ ಆರೋಗ್ಯ ಶಿಕ್ಷಣ ಕೋರ್ಸುಗಳ ವಿದ್ಯಾರ್ಥಿಗಳ ಪ್ರಮಾಣ ವಚನ, ದೀಪ ಬೆಳಗಿಸುವ ಕಾರ್ಯಕ್ರಮ ಹಾಗೂ ಶ್ವೇತ ಉಡುಪು ಧರಿಸುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಅರೆ ವೈದ್ಯಕೀಯ ಶಿಕ್ಷಣ ಕೋರ್ಸುಗಳು ಆರೋಗ್ಯವಂತ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸುತ್ತವೆ. ಕೇವಲ ಜ್ಞಾನವನ್ನು ತುಂಬಿಸುವುದರಿಂದ ಸಮರ್ಥ ಹಾಗೂ ಸಂವೇದನಾಶೀಲ ಶುಶ್ರೂಷಕರು ರೂಪುಗೊಳ್ಳಲಾರರು. ಮಾನವನ ಶರೀರ ವಿಜ್ಞಾನದ ಬಗ್ಗೆ ಆಳವಾದ ಜ್ಞಾನಪಡೆಯುವ ಜೊತೆಗೆ ರೋಗಿಗಳ ತಪಾಸಣೆ, ಪರೀಕ್ಷೆ, ಚಿಕಿತ್ಸೆ ಹಾಗೂ ಆರೋಗ್ಯಕರ ಜೀವನ ಕೌಶಲಗಳ ಬಗ್ಗೆ ಚಿಕಿತ್ಸೆ ಮತ್ತು ಆರೈಕೆಗಳಲ್ಲಿ ರೋಗಿಗಳ ಹತ್ತಿರವಿದ್ದು ಆತ್ಮವಿಶ್ವಾಸ ಮೂಡಿಸಿ ಅವರ ಪ್ರೀತಿ, ಗೌರವಗಳಿಗೆ ಪಾತ್ರರಾಗುವರೇ ನಿಜವಾದ ಶುಶ್ರೂಷಕರಾಗುತ್ತಾರೆ ಎಂದರು.

ನರ್ಸಿಂಗ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಗಳಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಸಂಜಯ್‌ಗಾಂಧಿ ಕಾಲೇಜಿನ ಫಿಜಿಯೋಥೆರಪಿ, ಕಾಲೇಜಿನ ಪ್ರಾಂಶುಪಾಲ ಡಾ.ಸಾಯಿಕುಮಾರ್, ಉತ್ತಮ ಶುಶ್ರೂಷಕ ತಂಡವಿಲ್ಲದೇ ಒಂದು ದೇಶದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ನರ್ಸಿಂಗ್ ಕೋರ್ಸುಗಳ ಆರೋಗ್ಯ ಸೇವೆಗಳಿಗೆ ಆಧಾರವಾಗಿರುವ ಜೀವನ ಗುಣಮಟ್ಟ ಉನ್ನತಿಗೊಳಿಸುವ ಕಾರ್ಯಕ್ಕೆ ನಿಮ್ಮನ್ನು ಸಿದ್ಧಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಇಂತಹ ಒಂದು ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳುಳ್ಳ ಆರೋಗ್ಯ ವಿಜ್ಞಾನ ಕೋರ್ಸುಗಳ ಕಾಲೇಜು ಸ್ಥಾಪಿಸಿರುವ ಡಾ.ಕೆ. ಸುಧಾಕರ್ ಕಾರ್ಯ ಸಾರ್ಥಕವಾಗಿದೆ ಎಂದು ಪ್ರಶಂಸಿಸಿದರು. ಇಲ್ಲಿ ಜ್ಞಾನ ಸಂಪಾದಿಸುವ ಜೊತೆಗೆ ಕೌಶಲ್ಯಗಳು, ಸಾಮಾಜಿಕ ಕಾಳಜಿ ಹಾಗೂ ಮಾನವೀಯತೆ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜೀವನ್ ಹಾಗೂ ಅನನ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಐ.ಎಸ್. ರಾವ್ ಮಾತನಾಡಿ, ಜಗತ್ತಿನ ಎಲ್ಲ ಶುಶ್ರೂಷಕರಿಗೂ ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆ ಮಾದರಿ ಹಾಗೂ ಪ್ರೇರಕವಾಗಿದ್ದು, ಅವರು ನರ್ಸಿಂಗ್ ಜಗತ್ತಿನ ಧ್ರುವತಾರೆ ಎನಿಸಿದ್ದಾರೆ. ಚಿಕಿತ್ಸೆ ನೀಡಿ, ನಿಗಾವಹಿಸಿ, ಆರೈಕೆ ಮಾಡುವ ರೋಗಿಗೆ ನೀವು ಮರುಜನ್ಮ ನೀಡುತ್ತೀರ. ಆದ್ದರಿಂದ ಆ ರೋಗಿಯು ನಿಮ್ಮನ್ನು ಜೀವನ ಪರ್‍ಯಂತ ಗೌರವಿಸುತ್ತಾನೆ. ಶಾಂತಾ ಸಂಸ್ಥೆಯಲ್ಲಿ ತರಬೇತಿ ಹೊಂದುವ ನೀವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ ಆರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಭಾರತೀಯ ತರಬೇತಿ ಪಡೆದ ಶುಶ್ರೂಷಕರ ಸಂಘದ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಡಾ.ಕೆ.ರಾಮು, ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ, ಪ್ರಾಂಶುಪಾಲರು ಡಾ.ನವೀನ್ ಸೈಮನ್, ಉಪಪ್ರಾಂಶುಪಾಲೆ ಡಯಾನ, ಬೋಧಕರಾದ ಡಾ.ನರೇಶ್, ಜಾಯಿದ್, ಗೀತಾ, ವ್ಯಾಲಂಟೇನ್, ಡಾ.ಆಯಿಷಾ, ಡ್ಯಾನಿಯಲ್, ಅನ್ವೇಷ, ಸುಪ್ರಿತಾ, ಸುಭಿಕ್ಷಾ, ವಿವಿಧ ಆರೋಗ್ಯ ಕೋರ್ಸುಗಳ ತರಬೇತಿ ವಿದ್ಯಾರ್ಥಿಗಳು ಇದ್ದರು. ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ: ಡಾ.ಪ್ರೀತಿ ಸುಧಾಕರ್: ಶಾಂತಾ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಡಾ. ಪ್ರೀತಿ ಸುಧಾಕರ್ ಮಾತನಾಡಿ, ನರ್ಸಿಂಗ್ ಶಿಕ್ಷಣ ತರಬೇತಿ ಹೊಂದುವ ನೀವು, ವೃತ್ತಿಯ ಬಗ್ಗೆ ಪ್ರಮಾಣ ವಚನ ಮಾಡಿ ಇಂದು ದೀಪ ಬೆಳಗಿದ್ದೀರಿ, ನಾಳೆ ಶುಶ್ರೂಷಕರಾದ ನಂತರ ಪ್ರತಿ ರೋಗಿಯಲ್ಲಿ ಆತ್ಮವಿಶ್ವಾಸ ಮೂಡಿಸಿ ಅವರಲ್ಲಿ ಅರಿವಿನ ಬೆಳಕನ್ನು ಮೂಡಿಸಬೇಕು. ಸಮರ್ಥ ಶುಶ್ರೂಷಕರು ಸಂವೇಧನಾಶೀಲರಾಗಿರಬೇಕಲ್ಲದೆ, ನರ್ಸಿಂಗ್ ವೃತ್ತಿಯಲ್ಲಿ ಪರಿಣಿತಿ, ಕೌಶಲಗಳೊಂದಿಗೆ ಸೇವಾ ಸಂಹಿತೆಯನ್ನು ಬೆಳೆಸಿಕೊಂಡಾಗ ಮಾತ್ರ ನರ್ಸಿಂಗ್ ಸೇವೆಗೆ ನ್ಯಾಯ ಒದಗಿಸಿ ಧನ್ಯತೆ ಪಡೆಯಬಲ್ಲಿರಿ. ಜ್ಞಾನ ಮತ್ತು ಕೌಶಲ್ಯಗಳ ಜೊತೆಗೆ ಕಾರುಣ್ಯ, ಅನುಭೂತಿ, ಸಮರ್ಪಣಾ ಭಾವ ಮತ್ತು ರೋಗಿಗಳ ಬಗ್ಗೆ ಕಾಳಜಿ ಹೊಂದಿ ಕರ್ತವ್ಯ ನಿರ್ವಹಿಸಬೇಕೆಂದು ಕರೆನೀಡಿದರು.

ನಿಮ್ಮ ಸಾರ್ಥಕ ಸೇವೆಯಿಂದಾಗಿ ದೇಶದ ಮಾನವ ಸಂಪತ್ತು ವೃದ್ಧಿಯಾಗಿ ನಮ್ಮ ದೇಶದ ಆರೋಗ್ಯ ಸೂಚ್ಯಂಕಗಳು ಜಾಗತಿಕವಾಗಿ ಉತ್ತಮಗೊಳ್ಳುವಂತಾಗಬೇಕು.

ನಿಮ್ಮ ಸಾಮರ್ಥ್ಯದ ಜೊತೆ ತಾಂತ್ರಿಕ ಕೌಶಲ್ಯಗಳು, ಸಂವೇದನಾಶೀಲತೆ ಅತ್ಯಂತ ಮುಖ್ಯವಾಗಿದ್ದು ನಿಮ್ಮ ವೃತ್ತಿಯಲ್ಲಿ ಪರಿಣಿತಿ ಮತ್ತು ಮಾನವೀಯತೆ ಸಮನ್ವಯಗೊಳ್ಳುವಂತೆ ನಿಮ್ಮನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ