ಹೆಚ್ಚು ಗಿಡ ಪೋಷಿಸಿ, ಪ್ರಕೃತಿ ರಕ್ಷಿಸಿ: ನ್ಯಾಯಾಧೀಶೆ ರೋಹಿಣಿ

KannadaprabhaNewsNetwork |  
Published : Jun 07, 2024, 12:32 AM IST
ದಾಂಡೇಲಿಯಲ್ಲಿ ವನಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಗಿಡ ನೆಡಲಾಯಿತು. | Kannada Prabha

ಸಾರಾಂಶ

ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಭೂದೇವಿಯನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು.

ದಾಂಡೇಲಿ: ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲ ಸಂಪನ್ಮೂಲಗಳು ಭೂಮಿಯ ಮೇಲಿದೆ. ಆದರೆ ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ನಿರ್ದಯನಾಗಿದ್ದಾನೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ರೋಹಿಣಿ ಡಿ. ಬಸಾಪುರ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಅರಣ್ಯ ಇಲಾಖೆಯಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು. ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ಹಾಳು ಮಾಡುತ್ತಿದ್ದಾರೆ. ಕಾಡು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಾಗಲು ಕಾರಣರಾಗಿದ್ದಾನೆ. ಇತ್ತೀಚಿನ ದಿನಗಳಲ್ಲಂತೂ ಪರಿಸರ ಹಾನಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ವರ್ಷದ ತಾಪಮಾನವೇ ಸಾಕ್ಷಿಯಾಗಿದೆ ಎಂದರು.

ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಭೂದೇವಿಯನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯನಾಶ ಮತ್ತು ಜೀವ ವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರವನ್ನು ಹಾಳು ಮಾಡುವುದನ್ನು ನಿಲ್ಲಿಸಿ ಪ್ರಕೃತಿ ನಾಶಕ್ಕೆ ಕಡಿವಾಣವನ್ನು ಹಾಕಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಮರಗಳನ್ನು ಉಳಿಸಿ ಪ್ರಕೃತಿ ಮಾತೆಯ ಒಡಲು ಹಸಿರಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ ಮಾತನಾಡಿ. ಈ ವರ್ಷ ವಿಶ್ವಪರಿಸರ ದಿನದ ಥೀಮ್ ಭೂಮಿ ಪುನಃ ಸ್ಥಾಪನೆ, ಮರುಭೂಮಿಕರಣ, ಮತ್ತು ಬರ ಸ್ಥಿತಿಸ್ಥಾಪಕತ್ವ. ಯುಎನ್ ಕನ್ವೇಶನ ಪ್ರಕಾರ ಭೂಮಿಯು ಶೇ. ೪೦ರಷ್ಟು ಕ್ಷೀಣಿಸಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.

ಸರ್ಕಾರದ ಅಭಿಯೋಜಕ ರಮೇಶ ಎಂ. ಬಂಕಾಪುರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಅನಿಲಕುಮಾರ ನಾಯ್ಕ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹನುಮಂತ ಕುಲಕರ್ಣಿ ಮಾತನಾಡಿದರು. ಇಎಸ್‌ಐ ಆಸ್ಪತ್ರೆ ವೈದ್ಯಾಧಿಕಾರಿ ಗೌಸ್ ಸಯ್ಯದ, ದಾಂಡೇಲಿ ವಲಯ ಅರಣ್ಯಧಿಕಾರಿ ಅಪ್ಪಾರಾವ್ ಕಲಶೆಟ್ಟಿ, ಇಎಸ್‌ಐ ಆಸ್ಪತ್ರೆಯ ಅಧಿಕ್ಷ ವಿನಯ, ಸಿವಿಲ್‌ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ, ವಕೀಲರು, ಅರಣ್ಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ