ಹೊಸಪೇಟೆ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಭಾರತಿಯ ದಂತ ವೈದ್ಯಕೀಯ ಸಂಘ ಹೊಸಪೇಟೆ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಭಾರತವನ್ನು ತಂಬಾಕು ಮುಕ್ತ ದೇಶವನ್ನಾಗಿ ಮಾಡುವುದು, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸಿ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಅದರಂತೆ ಮಕ್ಕಳನ್ನು ತಂಬಾಕಿನಿಂದ ದೂರವಿಡುವುದರಿಂದ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ. ತಂಬಾಕು ಉತ್ಪಾದನೆಯಿಂದ ಅಂತ್ಯದವರೆಗೂ ಪರಿಸರಕ್ಕೆ ಹಾಗೂ ಮನುಷ್ಯರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ. ಹಾಗಾಗಿ ಉತ್ತಮ ಸಮಾಜ, ಪರಿಸರ ಹಾಗೂ ಆರೋಗ್ಯಕ್ಕಾಗಿ ತಂಬಾಕು ತ್ಯಜಿಸಿ ಎಂದು ಹೇಳಿದರು.
ಜಿಪಂ ಸಿಇಒ ಸದಾಶಿವ ಪ್ರಭು ಮಾತನಾಡಿ, ತಂಬಾಕು ಈ ಸಮಾಜಕ್ಕೆ ಒಂದು ಪಿಡುಗಾಗಿ ಪರಿಣಮಿಸಿದೆ. ವಿಶ್ವಸಂಸ್ಥೆಯು ಪತ್ರಿ ವರ್ಷ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ತಂಬಾಕು ಮಕ್ಕಳಿಗೆ ಆಕರ್ಷಣೆಯಾಗದಂತೆ ತಡೆದು ಅದರ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ ಮಾತನಾಡಿ, ಇತ್ತೀಚೆಗೆ 13ರಿಂದ 18 ವರ್ಷದ ಮಕ್ಕಳು ತಂಬಾಕಿನ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ತಂಬಾಕು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ತಂಬಾಕು ನಿಯಂತ್ರಣ ಕೋಶದಿಂದ ಇಲ್ಲಿಯವರೆಗೂ ನಮ್ಮ ಜಿಲ್ಲೆಯಲ್ಲಿ 168 ಪ್ರಕರಣಗಳನ್ನು ದಾಖಲಿಸಿ ₹33,600 ದಂಡ ವಿಧಿಸಲಾಗಿದೆ ಎಂದರು.