ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಶ್ರೀರಕ್ಷೆ

KannadaprabhaNewsNetwork |  
Published : Oct 04, 2026, 02:45 AM IST
ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿ ನಡೆದ ಪೋಷಣ ಅಭಿಯಾನ ಹಾಗೂ ಪೌಷ್ಠಿಕ ಆಹಾರ ಶಿಬಿರದಲ್ಲಿ ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಮ್ ಮಾತನಾಡಿದರು. ಸರಸ್ವತಿ, ಪರಿಮಳ, ಕೆ.ಕಲಾವತಿ, ಬಿ.ಎಂ. ಮಂಜುಳಾ ಸೇರಿದಂತೆ ಇತರರು ಇದ್ದರು. | Kannada Prabha

ಸಾರಾಂಶ

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶ ಒಳಗೊಂಡ ಆಹಾರ ನೀಡುವುದು ಪಾಲಕರ ಪ್ರಮುಖ ಜವಾಬ್ದಾರಿಯಾಗಿದೆ.

ಕಂಪ್ಲಿ: ಪ್ರತಿದಿನ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲನ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಂಡರೆ ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ವಿವಿಧ ರೋಗಗಳಿಂದಲೂ ದೂರವಿರಬಹುದು ಎಂದು ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಮ್ ಹೇಳಿದರು.

ರಾಮಸಾಗರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶ ಒಳಗೊಂಡ ಆಹಾರ ನೀಡುವುದು ಪಾಲಕರ ಪ್ರಮುಖ ಜವಾಬ್ದಾರಿಯಾಗಿದೆ. ಬೆಳೆಯುವ ಹಂತದಲ್ಲಿರುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ನೀಡುವುದರಿಂದ ಅವರ ದೈಹಿಕ ಬೆಳವಣಿಗೆ ಹಾಗೂ ಕಲಿಕಾ ಸಾಮರ್ಥ್ಯ ಸುಧಾರಿಸಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಹಾಗೂ ತಾಯಂದಿರಿಗೆ ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ಬಾಣಂತಿಯರು ಹಾಗೂ ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ದೈನಂದಿನ ಆಹಾರದಲ್ಲಿ ಸೊಪ್ಪು, ತರಕಾರಿ, ಬೇಳೆಕಾಳು, ಧಾನ್ಯಗಳು, ಹಣ್ಣುಗಳು ಸೇರಿದಂತೆ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶ ಹೊಂದಿರುವ ಆಹಾರ ಪದಾರ್ಥ ಬಳಸಬೇಕು. ಕೇವಲ ಹೊಟ್ಟೆ ತುಂಬಿಸುವ ಆಹಾರಕ್ಕಿಂತ ದೇಹದ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶ ಒದಗಿಸುವ ಆಹಾರ ಸೇವಿಸುವ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದಬೇಕು ಎಂದು ಹೇಳಿದರು.

ಅಪೌಷ್ಟಿಕತೆಯ ಲಕ್ಷಣ ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಸಲಹೆ ಹಾಗೂ ಆರೈಕೆ ಪಡೆಯಬೇಕು. ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಆರೋಗ್ಯದ ಜತೆಗೆ ಮಗುವಿನ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ನೀಡುವ ಪೌಷ್ಟಿಕ ಆಹಾರ, ಆರೋಗ್ಯ ಮತ್ತು ಸ್ವಚ್ಛತೆ ಕುರಿತ ಸಲಹೆ ಪಾಲಿಸುವಂತೆ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ, ಪರಿಮಳ, ಕೆ.ಕಲಾವತಿ, ಬಿ.ಎಂ. ಮಂಜುಳಾ, ಸಿದ್ದನೀಲಮ್ಮ, ವಿಜಯಶ್ರೀ, ದೇವಿಕಾ, ಸಿ.ಮಂಜಮ್ಮ, ಅಂಜಲಿ, ಸುಭಾಷಿಣಿ, ಸಹಾಯಕಿಯರು ಹಾಗೂ ತಾಯಂದಿರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಭವಿಷ್ಯಕ್ಕೆ ಪ್ರಕೃತಿ ಸಂರಕ್ಷಣೆ ಅಗತ್ಯ: ಬಾಗಡೆ
ಬೆಳೆ ವಿಮೆ ಪರಿಹಾರ ಪರಿಶೀಲಿಸಿ ಪರಿಷ್ಕರಣೆಗೆ ಪ್ರಭು ಒತ್ತಾಯ