ಗ್ರಾಮಾಂತರದಲ್ಲೂ ಸ್ಥೂಲಕಾಯ ಹೆಚ್ಚಳ: ನಡ್ಡಾ

KannadaprabhaNewsNetwork |  
Published : Jun 08, 2025, 01:56 AM ISTUpdated : Jun 08, 2025, 10:21 AM IST
ನಿಮ್ಹಾನ್ಸ್‌ನಲ್ಲಿ ನಡೆದ ವಿಶ್ವ ಆಹಾರ ಸುರಕ್ಷತೆ ದಿನಾಚರಣೆ ಕಾರ್ಯಕ್ರಮದಲ್ಲಿ ಶುಗರ್ ಆ್ಯಂಡ್ ಆಯಿಲ್ ಬೋರ್ಡ್ ಭಿತ್ರಿಪತ್ರಗಳನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಬಿಡುಗಡೆ ಮಾಡಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್, ಸಂಸದ ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದೇಶದ ಜನರಲ್ಲಿ ಸ್ಥೂಲಕಾಯ ಹೆಚ್ಚುತ್ತಿದ್ದು, 2050ರ ವೇಳೆಗೆ ದೇಶದ ಮೂರನೇ ಒಂದು ಭಾಗದಷ್ಟು ಜನ ಸ್ಥೂಲಕಾಯ ಹೊಂದಲಿದ್ದಾರೆಂದು ಅಂದಾಜಿಸಲಾಗಿದೆ. 

  ಬೆಂಗಳೂರು : ದೇಶದ ಜನರಲ್ಲಿ ಸ್ಥೂಲಕಾಯ ಹೆಚ್ಚುತ್ತಿದ್ದು, 2050ರ ವೇಳೆಗೆ ದೇಶದ ಮೂರನೇ ಒಂದು ಭಾಗದಷ್ಟು ಜನ ಸ್ಥೂಲಕಾಯ ಹೊಂದಲಿದ್ದಾರೆಂದು ಅಂದಾಜಿಸಲಾಗಿದೆ. ಅನೇಕ ಕಾಯಿಲೆಗಳಿಗೆ ಮೂಲವಾಗಿರುವ ಸ್ಥೂಲಕಾಯದ ಅಪಾಯದಿಂದ ಪಾರಾಗಲು ನಮ್ಮ ಪೂರ್ವಜರಂತೆ ಸಾಂಪ್ರದಾಯಿಕ ಸಿರಿಧಾನ್ಯಗಳ ಆಹಾರ ಸೇವನೆ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ಶನಿವಾರ ನಗರದ ನಿಮ್ಹಾನ್ಸ್‌ನಲ್ಲಿ ‘ವಿಶ್ವ ಆಹಾರ ಸುರಕ್ಷತೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿನ ಮಧುಮೇಹ ಕುರಿತು ಐಸಿಎಂಆರ್‌ ನಡೆಸಿರುವ ಅಧ್ಯಯನದ ಪ್ರಕಾರ, 2008 ರಿಂದ 2020ರ ನಡುವೆ ನಗರ ಪ್ರದೇಶದಲ್ಲಿ ಶೇ.39ರಷ್ಟು ಸ್ಥೂಲಕಾಯ ಹೆಚ್ಚಳವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಶೇ.23.1ರಷ್ಟು ಹೆಚ್ಚಳವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಸುರಕ್ಷಿತ ಆಹಾರ ವಿಶೇಷವಾಗಿ ಮಕ್ಕಳಲ್ಲಿ ಹೆಚ್ಚು ತೊಂದರೆ ಉಂಟಾಗುತ್ತದೆ. ಹೀಗಾಗಿ, ಮಕ್ಕಳಿಗೆ ಕೇವಲ ಸಕ್ಕರೆ ಸೇವನೆ ಬೇಡ ಎಂದು ಸಲಹೆ ನೀಡಬೇಕು ಜತೆಗೆ ನಾವು ಸೇವಿಸುವ ಪ್ರತಿ ಆಹಾರದಲ್ಲಿ ಎಷ್ಟು ಕ್ಯಾಲೋರಿ ಇರುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು. ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಸೇವನೆ ಕಡಿತಗೊಳಿಸಬೇಕು. ಏನು ಸೇವಿಸಬೇಕು? ಏನು ಸೇವಿಸಬಾರದು? ಎಂಬ ಆಹಾರ ಜಾಗೃತಿ ಕುರಿತಾದ ಪಠ್ಯವನ್ನು ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಗ್ರಾಹಕರನ್ನು ಆಕರ್ಷಿಸಲು ಅನೇಕ ಕಂಪನಿಗಳು ಅಸುರಕ್ಷಿತ ಬಣ್ಣಗಳನ್ನು ಆಹಾರದಲ್ಲಿ ಸೇರ್ಪಡೆ ಮಾಡುತ್ತಿವೆ. ಇಂತಹ ಅಪಾಯಕಾರಿ ಕಲಬೆರಕೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಬೀದಿ ಬದಿ ಆಹಾರ ಸೇವನೆ ಸಂಸ್ಕೃತಿ ವೇಗವಾಗಿ ಹರಡುತ್ತಿದ್ದು, ಅದನ್ನು ಮೇಲ್ವಿಚಾರಣೆ ಮಾಡಬೇಕಿದೆ. ಅಲ್ಲಿ ಬಳಸುವ ಪದಾರ್ಥಗಳು ಸುರಕ್ಷಿತವೇ ಎನ್ನುವುದನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು ಎಂದರು.

ಇದೇ ವೇಳೆ ಆರೋಗ್ಯಕರ ಆಹಾರಶೈಲಿಗೆ ಪ್ರೋತ್ಸಾಹಿಸುವ ‘ಇಟ್ ರೈಟ್ ಇಂಡಿಯಾ’ ಆಂದೋಲನಕ್ಕೆ ಚಾಲನೆ ನೀಡಿ ಶುಗರ್ ಆ್ಯಂಡ್ ಆಯಿಲ್ ಬೋರ್ಡ್ ಭಿತ್ರಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ರಾಜ್ಯ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಉಪಸ್ಥಿತರಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ