ಗದಗ: ಇಲ್ಲಿನ ಶಿವಾನಂದ ಮಠದ ಹಿರಿಯ, ಕಿರಿಯ ಶ್ರೀಗಳ ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಮಧ್ಯೆ ಗುರುವಾರ ಶ್ರೀ ಮಠದ ಆವರಣದಲ್ಲಿ ನೂರಾರು ಭಕ್ತರು, ಹಿರಿಯರು ಸಭೆ ಸೇರಿ ಜಾತ್ರೆ ಆಚರಿಸುವ ನಿರ್ಧಾರ ಕೈಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.
ಈ ಶಿವಾನಂದ ಮಠಕ್ಕೆ ಅಭಿನವ ಶಿವಾನಂದ ಶ್ರೀಗಳು ಹಿರಿಯ ಶ್ರೀಗಳಾಗಿದ್ದು, ಅವರೇ ಮುಂದೆ ನಿಂತು ಕಿರಿಯ ಶ್ರೀಗಳಾದ ಸದಾ ಶಿವಾನಂದ ಭಾರತಿ ಶ್ರೀಗಳಿಗೆ ಪಟ್ಟಾಧಿಕಾರ ಮಾಡಿ, ಉತ್ತರಾಧಿಕಾರಿ ಎಂದು ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿದ್ದಾರೆ.
ಆದರೆ ಕೆಲ ವರ್ಷಗಳ ನಂತರ ಅದೇಕೋ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದು, ಪರಸ್ಪರ ಇಬ್ಬರೂ ಶ್ರೀಗಳ ಭಕ್ತರು ಬಹಿರಂಗವಾಗಿಯೇ ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಿರಿಯ ಶ್ರೀಗಳ ಉತ್ತರಾಧಿಕಾರಿ ನೇಮಕವೇ ಅಸಿಂಧು ಎನ್ನುವ ರೀತಿಯ ಪ್ರಕರಣ ದಾಖಲಾಗಿ ವಿಚಾರಣೆ ನಡೆಸುತ್ತಿದೆ. ಕೋರ್ಟ್ ಪ್ರಕರಣ ವಿಚಾರಣೆ ಮಧ್ಯೆ ಮತ್ತೆ ಜಾತ್ರೆ ಬಂದಿದ್ದು ಜಾತ್ರೆ ಆಚರಣೆ ವಿಷಯವೇ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.ಶ್ರೀ ಮಠದಲ್ಲಿ ಸಭೆ: ಪ್ರತಿ ಶಿವರಾತ್ರಿಯಂದು ಜರುಗುವ ಜಾತ್ರೆ ಆಚರಣೆಗೆ ಈಗಾಗಲೇ ಜಾತ್ರಾ ಸಮಿತಿ ಮಠದ ಭಕ್ತರ ಒಂದು ಭಾಗ ಮಾಡಿದೆ. ಆದರೆ ಬಹಿರಂಗ ಪಡಿಸಿಲ್ಲ. ಕಳೆದ ಸಾಲಿನಂತೆ ಈ ಬಾರಿಯೂ ತೊಂದರೆಯಾಗುವುದು ಬೇಡ ಎಂದು ಶಿವಾನಂದ ಮಠದ ನೂರಾರು ಭಕ್ತರು ಗುರುವಾರ ಶ್ರೀ ಮಠದ ಆವರಣದಲ್ಲಿ ಸಭೆ ನಡೆಸಿ, ನಾವು ಮಠದ ಭಕ್ತರು, ನಮಗೆ ಇಬ್ಬರೂ ಶ್ರೀಗಳು ಅಷ್ಟೇ, ಇಬ್ಬರನ್ನೂ ಕರೆದುಕೊಂಡು ಜಾತ್ರೆ ಮಾಡೋಣ, ಇಬ್ಬರೂ ಶ್ರೀಗಳನ್ನು ಭಕ್ತರೆಲ್ಲಾ ಸೇರಿ ಒಪ್ಪಿಸೋಣ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಂಡು ಉಭಯ ಶ್ರೀಗಳು ಭೇಟಿ ಮಾಡಿದರು. ಹಿರಿಯ ಶ್ರೀ ಅಸಮಾಧಾನ: ತಮ್ಮನ್ನು ಭೇಟಿ ಮಾಡಿದ ಭಕ್ತರಿಗೆ ಹಿರಿಯ ಶ್ರೀ ನೀವು ಏಕಾಏಕಿ ಬಂದು ಸಭೆ ಮಾಡಿದ್ದೀವಿ, ಒಪ್ಪಿಕೊಳ್ಳಿ ಎಂದರೆ ಹೇಗೆ ? ಈ ಬಗ್ಗೆ ನನಗೆ ಮೊದಲೇ ತಿಳಿಸಿಲ್ಲ. ನನಗೂ ಭಕ್ತ ಸಮೂಹವಿದೆ. ಅವರೊಂದಿಗೆ ಚರ್ಚಿಸಿ ಹೇಳುತ್ತೇನೆ ಎಂದು ಖಾರವಾಗಿಯೇ ಹೇಳಿದರು. ಶ್ರೀಗಳ ಕೋಣೆಯಲ್ಲಿ ನಡೆದ ಈ ಚರ್ಚೆಯ ವೇಳೆ ಶ್ರೀಗಳು ಸಾಕಷ್ಟು ಆಕ್ರೋಶ ಭರಿತರಾಗಿದ್ದರು.