- ವಾಣಿಜ್ಯ ಬಳಕೆಗೆ ಅನುಮತಿಸಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿದ್ದಾರ್ಥ ವಿಹಾರ ಟ್ರಸ್ಟ್ ಮನವಿ
ಕನ್ನಡಪ್ರಭ ವಾರ್ತೆ, ಕಲಬುರಗಿ.
ಸಿದ್ದಾರ್ಥ ವಿಹಾರ ಟ್ರಸ್ಟ್ ಅಡಿಯಲ್ಲಿರುವ ಕುಸನೂರು ಗ್ರಾಮದ ಸರ್ವೇ ನಂಬರ್ 82- 3 ರಲ್ಲಿರುವ 2 ಎಕರೆ 7 ಗುಂಟೆ ಜಮೀನನ್ನು ಉದ್ಯಾನವನ ವಲಯದಿಂದ ಕೈಬಿಟ್ಟು ವಾಣಿಜ್ಯ ಉಪಯೋಗಕ್ಕೆ ನಿಗದಿಪಡಿಸಲು ಸಲ್ಲಿಕೆಯಾಗಿರುವ ಕೋರಿಕೆಯಂತೆ ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಭೂ ಉಪಯೋಗ ನಿಗದಿಗೊಳಿಸುವ ಪ್ರಕಟಣೆಗೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅದ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಆಕ್ಷೇಪಣೆ ಸಲ್ಲಿಸಿದ್ದಾರೆ.ಈ ಕುರಿತಂತೆ ಶ್ರೀಗಳು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ತಕರಾರು ಅರ್ಜಿ ಸಲ್ಲಿಸಿದ್ದು ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಜಮೀನಿನ ಪಕ್ಕದಲ್ಲಿರುವ ಸರ್ವೇ ನಂಬರ್ 83 ರ 33 ಎಕರೆ ಜಮೀನು ಪ್ರಾಧಿಕಾರ ಉದ್ಯಾನವನ ಕ್ಕೆ ಮೀಸಲಿಟ್ಟಿದೆ. ಎಕರೆಗೆ 50 ಲಕ್ಷ ರು. ಕೊಟ್ಟು ಜಮೀನು ಖರೀದಿಸಿರುವ ಪ್ರಾಧಿಕಾರ, ಉದ್ಯಾನವನ ನಿರ್ಮಿಸದೆ ಹಾಗೇ ಬಿಟ್ಟಿದೆ.
2 ಎಕರೆ 7 ಗುಂಟೆ ಜಮೀನು ಐತಿಹಾಸಿಕ ಬುದ್ದ ವಿಹಾರ ಸಮೀಪ ಇದೆ. ಈಗಾಗಲೇ ಕಾಲೇಜು, ಇತರೆ ಕಟ್ಟಡಗಳಿವೆ. ಈ ಜಮೀನು ಉದ್ಯಾನವನ್ನಾಗಿ ಪ್ರಗತಿ ಕಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ, ಇದನ್ನು ಬಿಟ್ಟು ವಾಣಿಜ್ಯ ಬಳಕೆಗೆ ಬದಲಿಸಿದರೆ ಪ್ರಯೋಜನವಾಗುವುದಿಲ್ಲ. ಬಿಸಿಲೂರು ಹಸಿರಾಗಲು ಇಂತಹ ಪ್ರದೇಶಗಳಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಬೇಕೇ ಹೊರತು ವಾಣಿಜ್ಯೀಕರಣಕ್ಕೆ ಅವಕಾಶ ನೀಡಬಾರದು ಎಂದು ಆಂದೋಲಾ ಶ್ರೀಗಳು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಕರಾರು ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಫೋಟೋ- ಆಂದೋಲಾ ಶ್ರೀಗಳು