ಆದಿದ್ರಾವಿಡ ಜಾತಿ ಪಟ್ಟಿಗೆ ಮೇರಾ, ಮನ್ಸ ಜಾತಿ ಸೇರ್ಪಡೆಗೆ ಆಕ್ಷೇಪ

KannadaprabhaNewsNetwork | Published : May 23, 2025 12:11 AM
ರಾಜ್ಯಕ್ಕೆ ರಾಷ್ಟ್ರಪತಿಗಳಿಂದ ಅಧಿಸೂಚಿತ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ, ಇಲ್ಲದ ‘ಮೇರಾ’ ಮತ್ತು ‘ಮನ್ಸ’ ಹೆಸರಿನ ಜಾತಿಗಳನ್ನು ಒಳಮೀಸಲಾತಿ ಕುರಿತ ಸಮೀಕ್ಷೆಯಲ್ಲಿ ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿರುವ ಉಡುಪಿ ಜಿಲ್ಲಾಧಿಕಾರಿ ಕ್ರಮಕ್ಕೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
Follow Us

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯಕ್ಕೆ ರಾಷ್ಟ್ರಪತಿಗಳಿಂದ ಅಧಿಸೂಚಿತ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ, ಇಲ್ಲದ ‘ಮೇರಾ’ ಮತ್ತು ‘ಮನ್ಸ’ ಹೆಸರಿನ ಜಾತಿಗಳನ್ನು ಒಳಮೀಸಲಾತಿ ಕುರಿತ ಸಮೀಕ್ಷೆಯಲ್ಲಿ ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿರುವ ಉಡುಪಿ ಜಿಲ್ಲಾಧಿಕಾರಿ ಕ್ರಮವನ್ನು ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರಾ ಮತ್ತು ಮನ್ಸಾ ಜಾತಿಯಲ್ಲಿ ಗೊಂದಲವಿದೆ. ಈ ಜಾತಿಯನ್ನು ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳಿರುವುದು ಸರಿಯಲ್ಲ ಎಂದರು. ರಾಜ್ಯಕ್ಕೆ ಅಧಿಸೂಚಿತ ಪರಿಶಿಷ್ಟ ಜಾತಿಗಳ (101 ಜಾತಿಗಳು ಮಾತ್ರ) ಪಟ್ಟಿಯಲ್ಲಿ ಇಲ್ಲದ ಮೇರಾ ಮತ್ತು ಮನ್ಸ ಎಂಬ ಎರಡು ಜಾತಿಗಳನ್ನು ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸುವುದು ಸಂವಿಧಾನ ವಿರೋಧಿ ಎಂದರು. ಉಡುಪಿ ಜಿಲ್ಲಾಧಿಕಾರಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ, ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ವಿಧಾನದ ಮೂಲಕ ನಡೆಸಲಾದ ಒಳಮೀಸಲಾತಿ ಕುರಿತ ಸಮೀಕ್ಷೆಗೆ ಕಾನೂನಿನ ಮಾನ್ಯತೆ ಇರಲು ಸಾಧ್ಯವಿಲ್ಲ. ಆದ್ದರಿಂದ, ಇದನ್ನು ರಾಜ್ಯ ಸರ್ಕಾರ ಮತ್ತು ನ್ಯಾ. ಎಚ್.ಎನ್. ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗ ಮಾನ್ಯ ಮಾಡಬಾರದು ಎಂದು ಅಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ರಾಜ್ಯ ಆದಿದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಮುಖಂಡ ಅನಿಲ್ ಕಂಕನಾಡಿ, ಉಡುಪಿಯ ಮುಂಡಾಲ ಸಮಾಜದ ಮುಖಂಡ ಬಿ.ಕೆ ರಾಜು ಇದ್ದರು.