ಗಂಗಾವತಿ: ಮೊಬೈಲ್‌ನಲ್ಲಿ ಗೇಮ್ ಆಡಲು ಆಕ್ಷೇಪ ವ್ಯಕ್ತಪಡಿಸಿದರು ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನ ತಂದೆ ಹಾಗೂ ಅಕ್ಕನನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ಶನಿವಾರ ನಡೆದಿದೆ.
ಹೊಸ ಅಯೋಧ್ಯಾ ಗ್ರಾಮದಲ್ಲಿ ವೆಂಕಟನಾಯ್ಡು ತಮ್ಮ ಕುಟುಂಬದೊಂದಿಗೆ ಮನೆ ಮುಂದೆ ಹಣ್ಣು ತಿನ್ನುತ್ತಿರುವ ವೇಳೆ ಈತನ ಪುತ್ರ ಸಾಯಿ ವೆಂಕಟಮಣಿ (ವಡ್ಡರಹಟ್ಟಿ ವಿದ್ಯಾನಿಕೇತನ ಕಾಲೇಜಿನಲ್ಲಿ ವ್ಯಾಸಂಗ) ಮೊಬೈಲ್‌ನಲ್ಲಿ ಗೇಮ್ ಆಡುತ್ತಿರುವುದಕ್ಕೆ ಸಹೋದರಿ ಪ್ರಗತಿ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಮಾತಿಗೆ ಮಾತು ಬೆಳೆದು ವೆಂಕಟಮಣಿ ಚಾಕುವಿನಿಂದ ಸಹೋದರಿಗೆ ಹಿಗ್ಗಾಮುಗ್ಗಾ ತಿವಿದಿದ್ದಾನೆ. ಪ್ರಗತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಜಗಳ ಬಿಡಿಸಲು ಬಂದ ತಂದೆ ವೆಂಕಟನಾಯ್ಡು ಹಾಗೂ ತಾಯಿ ಸೌಜನ್ಯ ಅವರ ಮೇಲೆ ಮಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ತಂದೆ ವೆಂಕಟನಾಯ್ಡು ಅವರನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಅವರು ಭಾನುವಾರ ಬೆಳಗ್ಗೆ ಮೃತಪಟ್ಟರು. ತಾಯಿ ಸೌಜನ್ಯಾ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನ: ತಂದೆ, ತಾಯಿ, ಸಹೋದರಿಗೆ ಚಾಕುವಿನಿಂದ ಇರಿದ ಬಳಿಕ ಕೆಲವೇ ಕ್ಷಣದಲ್ಲಿ ಸಾಯಿ ವೆಂಕಟಮಣಿ ಚಾಕುವಿನಿಂದ ಕುತ್ತಿಗೆ ತಿವಿದು ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ. ಆತನ ವಿಚಾರಣೆ ನಡೆದಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಮಾಜಿ ಸಚಿವರ ಭೇಟಿ: ಹೊಸ ಅಯೋಧ್ಯಾ ಗ್ರಾಮಕ್ಕೆ ಮಾಜಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಎಸ್ಪಿ ರಾಮ್ ಎಲ್. ಅರಸಿದ್ದಿ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.