ಕರ್ನಾಟಕ ಪರ ಗೊತ್ತುವಳಿ, ವೀಕ್ಷಕರ ನೇಮಕಕ್ಕೆ ಆಕ್ಷೇಪ

KannadaprabhaNewsNetwork |  
Published : Oct 01, 2026, 03:00 AM IST
ತಿಪಟೂರಿನಲ್ಲಿ ಇಂದು ಅ.೧ ಗುರುವಾರ ಹಳ್ಳಿಕಾರ್ ರೈತ ಸಂಘದಿAದ ಪ್ರತಿಭಟನೆ | Kannada Prabha

ಸಾರಾಂಶ

ಕರ್ನಾಟಕ ಪರ ಗೊತ್ತುವಳಿ ಮಂಡನೆಯ ಹಿನ್ನೆಲೆಯಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್‌ ಸಭೆಯಲ್ಲಿ ವೀಕ್ಷಕರ ನೇಮಕವೇ ತೀವ್ರ ಚರ್ಚೆ ಹಾಗೂ ವಾಗ್ವಾದಕ್ಕೆ ಕಾರಣವಾಯಿತು. ಪರಿಷತ್‌ ಸಭೆಗೆ ಜಿಲ್ಲಾಧಿಕಾರಿಯವರು ಉಪವಿಭಾಗಾಧಿಕಾರಿ ಶ್ರವಣಕುಮಾರ ನಾಯ್ಕ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದರು. ಇದು ಕಾನೂನುಬಾಹಿರ ಎಂದು ಮೇಯರ್‌ ಪ್ರೀತಿ ಕಾಮಕರ ರೂಲಿಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ಪರ ಗೊತ್ತುವಳಿ ಮಂಡನೆಯ ಹಿನ್ನೆಲೆಯಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್‌ ಸಭೆಯಲ್ಲಿ ವೀಕ್ಷಕರ ನೇಮಕವೇ ತೀವ್ರ ಚರ್ಚೆ ಹಾಗೂ ವಾಗ್ವಾದಕ್ಕೆ ಕಾರಣವಾಯಿತು. ಪರಿಷತ್‌ ಸಭೆಗೆ ಜಿಲ್ಲಾಧಿಕಾರಿಯವರು ಉಪವಿಭಾಗಾಧಿಕಾರಿ ಶ್ರವಣಕುಮಾರ ನಾಯ್ಕ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದರು. ಇದು ಕಾನೂನುಬಾಹಿರ ಎಂದು ಮೇಯರ್‌ ಪ್ರೀತಿ ಕಾಮಕರ ರೂಲಿಂಗ್ ನೀಡಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಸರ್ಕಾರದ ಸೂಚನೆಯಂತೆ ವೀಕ್ಷಕರನ್ನು ನೇಮಕ ಮಾಡಿದ್ದರೆ ಅದನ್ನು ಕಾನೂನುಬಾಹಿರ ಎಂದು ಹೇಳುವುದು ಹೇಗೆ ಎಂಬ ಪ್ರಶ್ನೆ ಎತ್ತಿದರು. ಹೀಗಾಗಿ ವೀಕ್ಷಕರ ನೇಮಕದ ವಿಚಾರವೇ ಸಭೆಯಲ್ಲಿ ಪಾಲಿಕೆ ಹಾಗೂ ಜಿಲ್ಲಾಡಳಿತದ ಅಧಿಕಾರ ವ್ಯಾಪ್ತಿಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು.ವೀಕ್ಷಕರ ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಉಪಮೇಯರ್‌ ಹಣಮಂತ ಕೊಂಗಾಲಿ, ಪಾಲಿಕೆ ಪರಿಷತ್‌ ಸಭೆಗೆ ವೀಕ್ಷಕರನ್ನು ನೇಮಿಸುವ ಮೊದಲು ಪಾಲಿಕೆಯ ಗಮನಕ್ಕೆ ಅಧಿಕೃತ ಆದೇಶ ಹಾಗೂ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕಿತ್ತು. ಮೇಯರ್‌ ಅವರ ಗಮನಕ್ಕೂ ಈ ಪತ್ರ ವ್ಯವಹಾರವನ್ನು ತರಲಾಗಿದೆಯೇ ಎಂಬುದನ್ನು ಆಯುಕ್ತರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಮಟ್ಟದಲ್ಲಿ ವೀಕ್ಷಕರನ್ನು ನೇಮಿಸಲು ಅವಕಾಶವಿದೆಯೇ? ರಾಜ್ಯ ಸರ್ಕಾರದ ವಿರುದ್ಧ ಪಾಲಿಕೆ ಯಾವುದೇ ಕ್ರಮ ಕೈಗೊಂಡಿದ್ದರೆ ಸರ್ಕಾರದ ಗಮನಕ್ಕೆ ತರಲಿ. ಆದರೆ, ಪಾಲಿಕೆಯ ಚುನಾಯಿತ ಪರಿಷತ್‌ ಸಭೆಯ ಮೇಲೆ ಈ ರೀತಿಯ ವೀಕ್ಷಣಾ ವ್ಯವಸ್ಥೆ ಏಕೆ ಎಂದು ಪ್ರಶ್ನಿಸಿದರು. ಅಧಿಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉತ್ತರ ಬೇಕು ಎಂದು ಒತ್ತಾಯಿಸಿದರು. ಸದಸ್ಯ ರವಿ ಧೋತ್ರೆ ಕೂಡ ಮೇಯರ್‌ ಅನುಮತಿ ಇಲ್ಲದೆ ಯಾವುದೇ ಅಧಿಕಾರಿಯನ್ನು ಪರಿಷತ್‌ ಸಭೆಗೆ ಕರೆಸುವಂತಿಲ್ಲ ಎಂದು ಹೇಳಿ, 58 ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಯಾವುದೇ ತಪ್ಪು ಮಾಡಿದ್ದಾರೆಯೇ? ವೀಕ್ಷಕರನ್ನು ನೇಮಿಸುವ ಅಗತ್ಯ ಏಕೆ ಬಂತು ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕಾರ್ತಿಕ, ರಾಜ್ಯ ಪೌರಾಡಳಿತ ನಿರ್ದೇಶಕರಿಂದ ಪತ್ರ ಬಂದ ಬಳಿಕ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವೀಕ್ಷಕರ ನೇಮಕ ಮಾಡಲಾಗಿದೆ. ಈ ವಿಚಾರವನ್ನು ಮೇಯರ್‌ ಅವರ ಗಮನಕ್ಕೂ ತರಲಾಗಿದೆ. ವೀಕ್ಷಕರು ಸಭೆಗೆ ಆಗಮಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ರಾಜಶೇಖರ ಡೋಣಿ ಅವರು, ವೀಕ್ಷಕರ ನೇಮಕದ ಹಿನ್ನೆಲೆ ಸರ್ಕಾರದ ಪತ್ರ ಹಾಗೂ ಅದರ ಕಾನೂನುಬದ್ಧತೆಯ ಕುರಿತು ಸ್ಪಷ್ಟನೆ ಕೇಳಿದರು. ಸರ್ಕಾರ ವೀಕ್ಷಕರನ್ನು ನೇಮಕ ಮಾಡಿರುವುದು ತಪ್ಪೇ ಎಂದು ರಮೇಶ ಸೊಂಟಕ್ಕಿ ಪ್ರಶ್ನಿಸಿದರು. ಜಿಲ್ಲಾಧಿಕಾರಿಯವರು ವೀಕ್ಷಕರನ್ನು ನೇಮಕ ಮಾಡಿರುವುದು ಕಾನೂನುಬಾಹಿರ ಎಂದು ಮೇಯರ್‌ ರೂಲಿಂಗ್ ನೀಡಿರುವುದು ಸರ್ಕಾರದೊಂದಿಗೆ ಸಂಘರ್ಷಕ್ಕೆ ಕಾರಣವಾಗಬಹುದು. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಆಗ್ರಹಿಸಿದರು.ಇದಕ್ಕೆ ಮೇಯರ್‌ ಪ್ರೀತಿ ಕಾಮಕರ, ಪಾಲಿಕೆ ಇದುವರೆಗೆ ಸರ್ಕಾರದ ಎಲ್ಲ ಸುತ್ತೋಲೆಗಳನ್ನು ಪಾಲಿಸಿಕೊಂಡು ಬಂದಿದೆ. ಆದರೆ, ವೀಕ್ಷಕರ ನೇಮಕದ ಕ್ರಮದ ಬಗ್ಗೆ ಕಾನೂನುಬದ್ಧತೆಯ ಪ್ರಶ್ನೆ ಉದ್ಭವಿಸಿರುವುದರಿಂದ ಸರ್ಕಾರದ ಗಮನಕ್ಕೆ ತರುವಂತೆ ರೂಲಿಂಗ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಒಮ್ಮೆ ರೂಲಿಂಗ್ ನೀಡಿದರೆ ಮುಗಿಯಿತು ಎಂದು ಮೇಯರ್‌ ಹೇಳಿದಾಗ, ರಮೇಶ ಸೊಂಟಕ್ಕಿ ಆಕ್ಷೇಪ ವ್ಯಕ್ತಪಡಿಸಿ, ನಮಗೆ ಸ್ಪಷ್ಟೀಕರಣ ಕೇಳುವ ಹಕ್ಕಿದೆ. ಗಂಭೀರ ವಿಚಾರ ಆಗಿರುವುದರಿಂದ ಸ್ಪಷ್ಟ ಉತ್ತರ ನೀಡಬೇಕು ಎಂದರು. ಅಜಿಂ ಪಟವೇಗಾರ ಕೂಡ ವೀಕ್ಷಕರು ಬಂದಿರುವುದಕ್ಕೆ ಭಯಪಡುವ ಅಗತ್ಯವಿಲ್ಲ. ಅವರು ಕಾನೂನುಬಾಹಿರವಾಗಿ ಬಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಹೀಗಾಗಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರದ ಮಹತ್ವದ ಸಭೆಯಲ್ಲಿ ನಿರ್ಣಯಕ್ಕಿಂತಲೂ ವೀಕ್ಷಕರ ನೇಮಕದ ಅಧಿಕಾರದ ಪ್ರಶ್ನೆಯೇ ಕೆಲಕಾಲ ಕೇಂದ್ರ ಬಿಂದುವಾಯಿತು. ಜಿಲ್ಲಾಡಳಿತದ ಆದೇಶ, ಪೌರಾಡಳಿತ ನಿರ್ದೇಶನಾಲಯದ ಸೂಚನೆ ಹಾಗೂ ಪಾಲಿಕೆ ಪರಿಷತ್‌ನ ಸ್ವಾಯತ್ತ ಅಧಿಕಾರ ಈ ಮೂರು ಅಂಶಗಳು ಇದೀಗ ಮುಖಾಮುಖಿಯಾಗಿರುವಂತಾಗಿದೆ. ವೀಕ್ಷಕರ ನೇಮಕದ ಕಾನೂನುಬದ್ಧತೆ ಬಗ್ಗೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಪಡೆಯಲು ಮೇಯರ್‌ ಸೂಚಿಸಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹ ಪ್ರೀತಿ, ಸಹಬಾಳ್ವೆ ಬೆಳೆಸುವ ಸಾಧನ
ಪುಟ..2ಕ್ಕೆ ಕಟ್‌ ಲೀಡ್ಮೂರು ವರ್ಷವಾದರೂ ಮುಗಿಯದ ಜಲಧಾರೆ