ಪಾಲಿಕೆ ಸಭೆಯಲ್ಲಿ ವಂದೇ ಮಾತರಂ ಗದ್ದಲ

KannadaprabhaNewsNetwork |  
Published : Oct 01, 2026, 03:00 AM IST
ಫೋಟೋ- ಶ್ರೀಕಾಂತ ಶೆಟ | Kannada Prabha

ಸಾರಾಂಶ

ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಬುಧವಾರ ವಂದೇ ಮಾತರಂ ಗೀತೆ ಪ್ರಸಾರ ಹಾಗೂ ಹಾಡಿದ ಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಭಾಂಗಣದಲ್ಲಿನ ಮೈಕ್, ಎಸಿ ಹಾಗೂ ಫ್ಯಾನ್ ಸಮಸ್ಯೆಯೂ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಬುಧವಾರ ವಂದೇ ಮಾತರಂ ಗೀತೆ ಪ್ರಸಾರ ಹಾಗೂ ಹಾಡಿದ ಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಭಾಂಗಣದಲ್ಲಿನ ಮೈಕ್, ಎಸಿ ಹಾಗೂ ಫ್ಯಾನ್ ಸಮಸ್ಯೆಯೂ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಆರಂಭದಲ್ಲಿ ನಾಡಗೀತೆ ಪ್ರಸಾರವಾಗಿದ್ದು, ಎಲ್ಲ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ವಂದೇ ಮಾತರಂ ಗೀತೆ ಪ್ರಸಾರವಾಯಿತು. ರಾಜ್ಯ ಸರ್ಕಾರದ ಆದೇಶದಂತೆ ಎರಡು ಚರಣಗಳ ಧ್ವನಿಮುದ್ರಣ ಕೇಳಿಸಿದ ಬಳಿಕ ಬಿಜೆಪಿ ಸದಸ್ಯರು ಮುಂದಿನ ಚರಣಗಳನ್ನು ಸಾಮೂಹಿಕವಾಗಿ ಹಾಡಲು ಆರಂಭಿಸಿದರು. ಆರು ಚರಣಗಳನ್ನು ಹಾಡಿದ ಬಳಿಕವೂ ಧ್ವನಿಮುದ್ರಣ ಮುಂದುವರಿದಿದ್ದರಿಂದ ಕೆಲವರು ಕುಳಿತುಕೊಳ್ಳಲು ಮುಂದಾಗಿ, ತಕ್ಷಣ ಎದ್ದು ನಿಂತರು. ಬಳಿಕ ಭಾರತ ಮಾತಾ ಕಿ ಜೈ ಘೋಷಣೆ ಕೂಗಿದರು.ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಈ ಬೆಳವಣಿಗೆಯಿಂದ ವಂದೇ ಮಾತರಂ ಗೀತೆಗೆ ಅವಮಾನವಾಗಿದೆ ಎಂದು ಆಕ್ಷೇಪಿಸಿದರು. ನಾವು ವಂದೇ ಮಾತರಂ ಗೀತೆಯ ವಿರೋಧಿಗಳಲ್ಲ. ನಾವೂ ದೇಶಭಕ್ತರು. ಆದರೆ ಎಷ್ಟು ಚರಣ ಹಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕಿತ್ತು ಎಂದರು. ಇದಕ್ಕೆ ಬಿಜೆಪಿ ಸದಸ್ಯ ಸಂದೀಪ ಜೀರಗ್ಯಾಳ, ವಂದೇ ಮಾತರಂ ಪೂರ್ಣವಾಗಿ ಹಾಡಿದರೆ ನಿಮಗೇನು ಸಮಸ್ಯೆ ಎಂದು ಪ್ರಶ್ನಿಸಿದರು. ಗೀತೆ ಮುಗಿಯುವ ಮುನ್ನವೇ ಕೆಲವರು ಕುಳಿತಿರುವುದೇ ತಮ್ಮ ಆಕ್ಷೇಪ ಎಂದು ಸೊಂಟಕ್ಕಿ ತಿರುಗೇಟು ನೀಡಿದರು. ಎರಡೂ ಗುಂಪಿನ ಸದಸ್ಯರ ವಾಗ್ವಾದದಿಂದ ಕೆಲಕಾಲ ಗದ್ದಲ ಉಂಟಾಯಿತು.ಧ್ವನಿಮುದ್ರಣದ ತಾಂತ್ರಿಕ ನಿರ್ವಹಣೆ ಬಗ್ಗೆ ಮೇಯರ್ ಪ್ರೀತಿ ಕಾಮಕರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಷತ್ ಕಾರ್ಯದರ್ಶಿ, ಸರ್ಕಾರದ ಆದೇಶದಂತೆ ಎರಡು ಚರಣಗಳನ್ನಷ್ಟೇ ಪ್ರಸಾರ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ಧ್ವನಿಮುದ್ರಣ ಪುನರಾವರ್ತನೆಯಾಗಿ ಸುಮಾರು ಮೂರು ನಿಮಿಷಗಳ ಕಾಲ ಗೀತೆ ಕೇಳಿಸಿದೆ ಎಂದು ಸ್ಪಷ್ಟಪಡಿಸಿದರು. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಯರ್ ಸೂಚಿಸಿದರು.ಕೈಕೊಟ್ಟ ಮೈಕ್‌, ಎಸಿ:

ಸಭಾಂಗಣದಲ್ಲೇ ಮೈಕ್ ಪದೇಪದೇ ಕಿರಿಕಿರಿ ಮಾಡಿದ್ದು, ಎಸಿ ಕಾರ್ಯನಿರ್ವಹಿಸದೆ ಸದಸ್ಯರು ಹಾಗೂ ಅಧಿಕಾರಿಗಳು ಪರದಾಡಿದರು. ಕೂಲರ್ ಚಾಲನೆ ಮಾಡಿದಾಗ ಮೈಕ್‌ನಲ್ಲಿ ಕಿರಿಕಿರಿ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ಬಂದ್ ಮಾಡಿ ಫ್ಯಾನ್ ಬಳಸಲಾಯಿತು. ಕಳೆದ ಸಭೆಯಲ್ಲೇ ಮೈಕ್ ದುರಸ್ತಿ ಮಾಡುವಂತೆ ಸೂಚಿಸಿದ್ದರೂ ಕ್ರಮ ಕೈಗೊಳ್ಳದಿರುವುದಕ್ಕೆ ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ ರವಿ ದೋತ್ರೆ ಕೂಡ ಪಾಲಿಕೆಯ ಸ್ವಂತ ಸಭಾಂಗಣದಲ್ಲೇ ಮೂಲಸೌಲಭ್ಯಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಆಕ್ಷೇಪಿಸಿದರು. ಪ್ರತಿಪಕ್ಷ ಸದಸ್ಯ ಮುಜ್ಮಿಲ್‌ ಡೋಣಿ ಅವರು ತಾವೇ ಸ್ವತಃ ಮೈಕ್‌ವೊಂದನ್ನು ಖರೀದಿಸಿಕೊಂಡು ಸಭೆಗೆ ತಂದರು.ಠರಾವು ಮಾಡುತ್ತೇವೆ, ಕ್ರಮ ಯಾವಾಗ?:

ಪಾಲಿಕೆ ಸದಸ್ಯ ಸಂದೀಪ ಜೀರಗ್ಯಾಳ ಮಾತನಾಡಿ, ಜನರ ಸಮಸ್ಯೆ ಪರಿಹರಿಸಲು ಪಾಲಿಕೆ ಸಭೆಯಲ್ಲಿ ಠರಾವು ಮಾಡುತ್ತೇವೆ. ಅಕ್ರಮಗಳನ್ನು ಗಮನಕ್ಕೆ ತರುತ್ತೇವೆ. ಸಮಿತಿಗಳನ್ನೂ ರಚಿಸುತ್ತೇವೆ. ಆದರೆ ಕ್ರಮವೇ ಆಗದಿದ್ದರೆ ಬೆಳಗಾವಿ ಜನತೆಗೆ ನಾವು ಏನು ಉತ್ತರ ಕೊಡಬೇಕು? ಠರಾವುಗಳ ಅನುಷ್ಠಾನ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಪಾಲಿಕೆಗೆ ಆರ್ಥಿಕ ನಷ್ಟ ಉಂಟುಮಾಡುವ ವಿಚಾರಗಳು, ಪಾಲಿಕೆ ಆಸ್ತಿಗಳ ಬಳಕೆ, ನಾಲೆಗಳ ಮೇಲಿನ ಕಟ್ಟಡ ಹಾಗೂ ಕಟ್ಟಡ ಅನುಮತಿಯಿಲ್ಲದ ಚಟುವಟಿಕೆಗಳ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ಕ್ರಮವಾಗಿಲ್ಲ ಎಂದು ಆರೋಪಿಸಿದರು. ಪಾಲಿಕೆ ಆಸ್ತಿಗಳಿಂದ ಸಮರ್ಪಕ ಆದಾಯ ಪಡೆಯಬೇಕು. ಪಾಲಿಕೆಯ ಆದಾಯದ ಬಹುಪಾಲು ಸಿಬ್ಬಂದಿ ವೇತನಕ್ಕೆ ವೆಚ್ಚವಾಗುತ್ತಿದೆ. ಉಳಿದ ಹಣದಲ್ಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿರುವುದರಿಂದ ಆದಾಯ ಮೂಲಗಳನ್ನು ಬಲಪಡಿಸುವುದು ಅಗತ್ಯ ಎಂದರು.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ವರ್ಗಾವಣೆಯಾಗಬಹುದು. ಆದರೆ ಚುನಾಯಿತ ಪ್ರತಿನಿಧಿಗಳು ಜನರ ಬಳಿಯೇ ಇರಬೇಕು. ಕೆಲಸಗಳೇ ಆಗದಿದ್ದರೆ ಜನರ ಬಳಿಗೆ ಯಾವ ಮುಖ ಇಟ್ಟುಕೊಂಡು ಹೋಗಬೇಕು ಎಂದು ಪ್ರಶ್ನಿಸಿದ ಜೀರಗ್ಯಾಳ, ಈವರೆಗೆ ಅಂಗೀಕರಿಸಿರುವ ಠರಾವುಗಳ ಪೈಕಿ ಎಷ್ಟು ನಿರ್ಣಯಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರವನ್ನು ಮುಂದಿನ ಸಭೆಗೆ ನೀಡಬೇಕು ಎಂದು ಒತ್ತಾಯಿಸಿದರು.ಪಠಾಣ ವಿರುದ್ಧ ಆಕ್ರೋಶ:

ಇದೇ ವೇಳೆ ಪರಿಷತ್ ಸಭೆಯಲ್ಲಿ ತಮ್ಮನ್ನು ಮಹಿಳಾ ಅಧಿಕಾರಿ ಎಂಬುದನ್ನೂ ಪರಿಗಣಿಸದೆ ಪಾಲಿಕೆ ಸದಸ್ಯ ಶಾಹೀದ್‌ಖಾನ್ ಪಠಾಣ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಪಾಲಿಕೆ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಆರೋಪಿಸಿದರು. ಸಭೆ ಬಳಿಕ ಅವರು, ಬೇರೆ ಯಾವುದೇ ಅಧಿಕಾರಿಯೊಂದಿಗೆ ಮಾತನಾಡುವ ರೀತಿಯಲ್ಲಿ ನನ್ನೊಂದಿಗೆ ಮಾತನಾಡಿದರೆ ನಡೆಯುವುದಿಲ್ಲ. ಮಹಿಳಾ ಅಧಿಕಾರಿಗೆ ಗೌರವ ನೀಡಬೇಕು. ಪರಿಷತ್‌ ಸಭೆಯಲ್ಲಿ ನನ್ನನ್ನು ಅವಮಾನ ಮಾಡುವ ರೀತಿಯಲ್ಲಿ ಬಾಯಿಗೆ ಬಂದಂತೆ ಮಾತನಾಡಿರುವ ಪಠಾಣ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹ ಪ್ರೀತಿ, ಸಹಬಾಳ್ವೆ ಬೆಳೆಸುವ ಸಾಧನ
ಪುಟ..2ಕ್ಕೆ ಕಟ್‌ ಲೀಡ್ಮೂರು ವರ್ಷವಾದರೂ ಮುಗಿಯದ ಜಲಧಾರೆ