ಗ್ರಾಮೀಣ ವಿದ್ಯಾರ್ಥಿಗಳಿಂದ ಗ್ರಹ-ನಕ್ಷತ್ರಪುಂಜಗಳ ವೀಕ್ಷಣೆ

KannadaprabhaNewsNetwork | Published : May 9, 2024 1:01 AM

ಸಾರಾಂಶ

ಟೆಲಿಸ್ಕೋಪ್ ಮೂಲಕ ಆಕಾಶದಲ್ಲಿರುವ ನಕ್ಷತ್ರ ಪುಂಜ ಮತ್ತು ಮಂಗಳ, ಬುಧ, ಚಂದ್ರ, ಕ್ಷೀರ ಪಥ ( ಹಾಲು ಹಾದಿ ) ಗ್ಯಾಲಕ್ಸಿಯ ಇಣುಕುನೋಟ, ಉಂಗುರಗಳೊಂದಿಗೆ ಶನಿ ಗ್ರಹ, ನಿಹಾರಿಕೆ ಎಂಬ ಗ್ರಹಗಳ ವೀಕ್ಷಣೆ ಮಾಡಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ವಿದ್ಯಾರ್ಥಿಗಳಿಗೆ ಆಕಾಶಕಾಯದಲ್ಲಿರುವ ಗ್ರಹ-ನಕ್ಷತ್ರ ಪುಂಜಗಳ ವೀಕ್ಷಣೆಯು ವೈಜ್ಞಾನಿಕ ಮನೋಭಾವ ಹೆಚ್ಚಿಸುತ್ತದೆ ಎಂದು ಶ್ರೀ ವೆಂಕಟೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಹೇಳಿದರು.

ತಾಲೂಕಿನ ಮೂಡಲದೊಡ್ಡಿ (ಶ್ರೀಪತಿ) ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಅಭಿನವ ಭಾರತಿ ಸಮೂಹ ಶಿಕ್ಷಣ ಟ್ರಸ್ಟ್ ಮಂಡ್ಯ ಮತ್ತು ಆಸ್ಟ್ರೋ ಸ್ಟೇಲ್ಲಾರ್ಸ್ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆಸಲಾದ ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ಮೂಲಕ ನಕ್ಷತ್ರಗಳು ಮತ್ತು ಮಂಗಳ, ಬುದ್ಧ, ಶನಿ ಗ್ರಹಗಳ ವೀಕ್ಷಣೆ ಕಾರ್ಯಕ್ರಮ’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿನ ಜಾಗತಿಕ ಪ್ರಪಂಚದಲ್ಲಿ ವೈಜ್ಞಾನಿಕ ವಿಚಾರಗಳು, ಅವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿದ್ದು, ಇಂತಹ ವಿಜ್ಞಾನ- ತಂತ್ರಜ್ಞಾನ-ವೈಜ್ಞಾನಿಕ ವಿಷಯಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ನುಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ, ಆಕಾಶಕಾಯದಲ್ಲಿರುವ ಅಖಂಡತೆಯ ವೈಜ್ಞಾನಿಕ ವಿಸ್ಮಯಗಳು ಕಣ್ಣ ಮುಂದೆ ಕಂಡಾಗ ರೋಮಾಂಚನವಾಗುತ್ತದೆ. ತಂತ್ರಜ್ಞಾನ ಬೆಳವಣಿಗೆಯ ನಾಗಾಲೋಟಕ್ಕೆ ಇದೊಂದು ಸಾಕ್ಷಿ ಎಂದರು.

ಇಂದಿನ ದಿನಗಳಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಮಗುವಿಗೂ ತಂತ್ರಜ್ಞಾನದ ಶಿಕ್ಷಣ ಲಭ್ಯವಾಗಿ ಪ್ರತಿಭಾವಂತರನ್ನಾಗಿಸುವ ಕಾರ್ಯವನ್ನು ಶಾಲೆಗಳು ಮಾಡುತ್ತಾ ಬಂದಿವೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಸಂಸ್ಥೆಯು ಒಂದು ಹೆಜ್ಜೆ ಮುಂದುವರೆದು ಟೆಲಿಸ್ಕೋಪ್ ಮೂಲಕ ಆಕಾಶಕಾಯದಲ್ಲಿರುವ ಗ್ರಹಗಳನ್ನು ವಿದ್ಯಾರ್ಥಿಗಳಿಗೆ ವೀಕ್ಷಣೆ ಮಾಡಿಸುವ ಸುಕಾರ್ಯವನ್ನು ಯಶಸ್ಸಿಗೊಳಿಸಲಾಗುತ್ತಿದೆ, ಸ್ಟಾರ್ ಗೇಜಿಂಗ್ ನೈಟ್ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದರು.

ಟೆಲಿಸ್ಕೋಪ್ ಮೂಲಕ ಆಕಾಶದಲ್ಲಿರುವ ನಕ್ಷತ್ರ ಪುಂಜ ಮತ್ತು ಮಂಗಳ, ಬುಧ, ಚಂದ್ರ, ಕ್ಷೀರ ಪಥ ( ಹಾಲು ಹಾದಿ ) ಗ್ಯಾಲಕ್ಸಿಯ ಇಣುಕುನೋಟ, ಉಂಗುರಗಳೊಂದಿಗೆ ಶನಿ ಗ್ರಹ, ನಿಹಾರಿಕೆ ಎಂಬ ಗ್ರಹಗಳ ವೀಕ್ಷಣೆ ಮಾಡಿಸುತ್ತೇವೆ ಎಂದು ಹೇಳಿದರು.

ಮಂಡ್ಯ ತಾಲೂಕಿನ ಕೀಲಾರ ಮತ್ತು ಈಚಗೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಗ್ರಹ-ನಕ್ಷತ್ರಗಳನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಆಸ್ಟ್ರೋ ಸ್ಟೇಲ್ಲಾರ್ಸ್ ಸಂಸ್ಥೆಯವರಾದ ಪ್ರಜ್ವಲ್ ಮತ್ತು ಶಿವಪ್ರಕಾಶ್ ಹಾಗೂ ಇತರರು ಹಾಜರಿದ್ದರು.

Share this article